ರಾಜ್ಯದಲ್ಲಿ 4ನೇ ಕೊರೊನಾ ಪ್ರಕರಣ – ಆರ್‌ಆರ್ ನಗರದ ಟೆಕ್ಕಿಗೆ ಸೋಂಕು

Public TV
2 Min Read

ಬೆಂಗಳೂರು: ಮಹಾಮಾರಿ ಕೊರೊನಾ ನಿಧಾನವಾಗಿ ರಾಜ್ಯಕ್ಕೆ ಹರಡುತ್ತಿದ್ದು, ಸಿಲಿಕಾನ್ ಸಿಟಿಯ ಮತ್ತೊಬ್ಬ ಟೆಕ್ಕಿಯಲ್ಲಿ ವೈರಸ್ ಇರುವುದು ಖಚಿತವಾಗಿದೆ. ಈ ಮೂಲಕ ರಾಜ್ಯದಲ್ಲಿ ಕಾಣಿಸಿಕೊಂಡ ನಾಲ್ಕನೇ ಪ್ರಕರಣ ಇದಾಗಿದೆ.

ಟೆಕ್ಕಿ ರಾಜರಾಜೇಶ್ವರಿ ನಗರದ ನಿವಾಸಿಯಾಗಿದ್ದು, 44 ವರ್ಷದವರಾಗಿದ್ದಾರೆ. ಟೆಕ್ಕಿ ಮನೆಯಲ್ಲಿ ಒಟ್ಟು ನಾಲ್ಕು ಜನ ವಾಸವಿದ್ದು, ಓರ್ವ ಮಗಳು, ಮಗ ಹಾಗೂ ಪತ್ನಿ ವಾಸವಿದ್ದಾರೆ. ಟೆಕ್ಕಿ ಇತ್ತೀಚೆಗಷ್ಟೇ ಅಮೆರಿಕದ ಲಾಸ್ ಏಂಜಲೀಸ್‍ಗೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಈ ವೇಳೆಯೇ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಇವರ ಮಗಳು ಪಿಯುಸಿ ಓದುತ್ತಿದ್ದು, ಆದರೆ ಆಕೆಯ ದೇಹದಲ್ಲಿ ಕೊರೋನಾ ಸೋಂಕು ಲಕ್ಷಣ ಕಾಣಿಸಿಕೊಂಡಿಲ್ಲ.

ಟೆಕ್ಕಿ ಮಗ ಹಾಗೂ ಪತ್ನಿಗೂ ಈಗ ಟೆಸ್ಟ್ ನಡೆದಿದ್ದು, ನೆಗೆಟಿವ್ ಬಂದಿದೆ. ಶಾಲೆಯ ಸೆಕ್ಯುರಿಟಿ ಗಾರ್ಡ್‍ಗೂ ಟೆಸ್ಟ್ ಮಾಡಲಾಗುತ್ತಿದ್ದು, ಶಾಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ.

ಟೆಕ್ಕಿ ಪುತ್ರಿಗೆ ನಾಳೆಯೇ ಪರೀಕ್ಷೆ
ನಾಳೆಯೇ ಟೆಕ್ಕಿ ಪುತ್ರಿಗೆ ಪರೀಕ್ಷೆ ಇದ್ದು, ಸ್ವತಃ ಆರೋಗ್ಯಾಧಿಕಾರಿಗಳೇ ಈಕೆಯನ್ನು ಪಿಯುಸಿ ಪರೀಕ್ಷಾ ಕೊಠಡಿಗೆ ಕರೆದೊಯ್ಯಲಿದ್ದಾರೆ. ಪ್ರತ್ಯೇಕವಾಗಿ ಪರೀಕ್ಷೆ ಬರೆಸುವ ಕುರಿತು ಕ್ರಮ ಕೈಗೊಳ್ಳಲಾಗಿದ್ದು, ಪರೀಕ್ಷೆ ಬರೆಯುವ ವೇಳೆ ಆರೋಗ್ಯಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಈಗಾಗಲೇ ಆಕೆಯ ಪರೀಕ್ಷಾ ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿನಿಯನ್ನು ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ.

ಸಮಾಧಾನಕರ ವಿಚಾರ ಎಂಬಂತೆ ವೈಟ್ ಫೀಲ್ಡ್ ಟೆಕ್ಕಿಯ ಸಹೋದ್ಯೋಗಿ ದೇಹದಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿಲ್ಲ. ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೆ ಹೊಸ ಪ್ರಕರಣ ಎಂಬಂತೆ ಆರ್ ಆರ್ ನಗರದ ಟೆಕ್ಕಿಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಮತ್ತಷ್ಟು ಆತಂಕವನ್ನು ಉಂಟುಮಾಡಿದೆ. ಕೊರೊನಾ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಫೇಸ್‍ಬುಕ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪೊಸ್ಟ್ ನಲ್ಲಿ ಏನಿದೆ?
ನಿನ್ನೆ ಕೊರೊನಾ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಕುಟುಂಬದವರ ರಕ್ತ ಪರೀಕ್ಷೆ ನಡೆಸಲಾಗಿದ್ದು ಆ ವ್ಯಕ್ತಿಯ ಪತ್ನಿ, ಮಗಳು ಹಾಗು ಅವರ ಸಹೋದ್ಯೋಗಿಗೂ ಕೊರೊನಾ ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರ ಸಂಪರ್ಕಕ್ಕೆ ಬಂದಿದ್ದ ಜನರನ್ನು ಪ್ರತ್ಯೇಕಿಸಿ ಅಗತ್ಯ ಸೂಚನೆ ನೀಡಲಾಗಿದೆ. ನಾವು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ.

https://www.facebook.com/DrSudhakarK.Official/photos/a.369854736537190/1323652767824044

ಆರೋಗ್ಯ ಸಚಿವರ ಜೊತೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತು ವಿವರಣೆ ನೀಡಿದ್ದೇವೆ. ಸದ್ಯದಲ್ಲೇ ಇನ್ನೊಂದು ಉನ್ನತಮಟ್ಟದ ಸಭೆ ಕರೆಯಲಾಗಿದೆ. ಮತ್ತೊಮ್ಮೆ ರಾಜ್ಯದ ನಾಗರಿಕರಿಗೆ ಹೇಳಬಯಸುವುದೇನೆಂದರೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಸಮರೋಪಾದಿಯಲ್ಲಿ ಅನುಸರಿಸುತ್ತಿದೆ. ಸಾರ್ವಜನಿಕರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕುರಿತು ಮಾಹಿತಿ ಎಲ್ಲಾ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅದನ್ನು ಅನುಸರಿಸಿ. ನೀವು ಸುರಕ್ಷಿತವಾಗಿರಿ. ಕೊರೋನ ಹರಡದಂತೆ ತಡೆಯಲು ಸರ್ಕಾರದ ಜೊತೆ ಸಹಕರಿಸಿ.

Share This Article
Leave a Comment

Leave a Reply

Your email address will not be published. Required fields are marked *