ಮೈಸೂರು ರೈತ ದಸರಾಕ್ಕೆ ಚಾಲನೆ: ಏನೆಲ್ಲ ಸ್ಪರ್ಧೆ ನಡೆಯುತ್ತದೆ?

Public TV
1 Min Read

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದ ದಿನದಿಂದ ಮೈಸೂರಿನಲ್ಲಿ ಸಂಸ್ಕೃತಿಯ ಅನಾವರಣವಾಗುತ್ತಿದೆ. ದಸರಾ ಮಹೋತ್ಸವದ ಮೂರನೇ ದಿನವಾದ ಇಂದು ರೈತ ದಸರಾಗೆ ಚಾಲನೆ ಸಿಕ್ಕಿತು.

ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಚಾಲನೆ ನೀಡಿದರು. ನಂತರ ಸಚಿವ ಶಿವಕುಮಾರ್ ರೆಡ್ಡಿ ಎತ್ತಿನಗಾಡಿ ಹತ್ತಿ ಎತ್ತಿನ ಹಗ್ಗ ಮತ್ತು ಚಾವಟಿ ಹಿಡಿದು ಎತ್ತಿನಗಾಡಿಯ ಸಾರಥಿಯಾದರು. ಈ ವೇಳೆ ಸಚಿವರಾದ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ಶಿವಶಂಕರ್ ರೆಡ್ಡಿಗೆ ಸಾಥ್ ನೀಡಿದರು.

ಮೆರವಣಿಗೆಯಲ್ಲಿ ಅಲಂಕಾರಗೊಂಡ ಎತ್ತಿನಗಾಡಿಗಳು, ಬಂಡೂರು ಕುರಿಗಳು, ಗ್ರಾಮೀಣ ಸೋಬಗು ಸಾರುವ ಮತ್ತು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯುಳ್ಳ ಸ್ತಬ್ಧ ಚಿತ್ರಗಳು ಗ್ರಾಮೀಣ ಸೊಬಗನ್ನು ಬಿಂಬಿಸಿದವು. ಕಂಸಾಳೆ, ಕೋಲಾಟ, ಗಾರು ಗೊಂಬೆ, ಹುಲಿವೇಶ, ಪೂಜಾ ಕುಣಿತ, ನಂದಿ ಧ್ವಜ ಕುಣಿತ, ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ಮೊದಲಾದ ಕಲಾ ತಂಡಗಳು ಮೆರವಣಿಗೆಗೆ ರಂಗು ತಂದವು.

ಮೆರವಣಿಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಅರಸು ರಸ್ತೆ ಮೂಲಕ ಜೆಕೆ ಮೈದಾನ ತಲುಪಿತು. ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಮುಂದಿನ ದಿನಗಳಲ್ಲಿ ರೈತರಿಗೆ ಉಪಯುಕ್ತವಾಗುವ ಯೋಜನೆಗಳನ್ನು ಜಾರಿಗೆ ಮಾಡಲಾಗುತ್ತದೆ. ರೈತರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲವನ್ನು ಡಿಸೆಂಬರ್ ತಿಂಗಳಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಎರಡನೇ ಹಂತದ ಮೂಲಕ ಪಾವತಿ ಮಾಡಲಾಗುತ್ತದೆ ಎಂದು ಹೇಳಿದರು.

ಶುಕ್ರವಾರದಿಂದ ಭಾನುವಾರದವರೆಗೆ ರೈತ ದಸರಾ ನಡೆಯಲಿದ್ದು, ವಸ್ತು ಪ್ರದರ್ಶನ, ಗ್ರಾಮೀಣ ಕ್ರೀಡಾಕೂಟ, ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *