ಬೆಂಗಳ್ಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ

Public TV
2 Min Read

ಬೆಂಗಳೂರು: ನಗರದ ಹಲವೆಡೆ ಹಾಗೂ ದಕ್ಷಿಣದ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗಿದ್ದು, ಕೊಡಗಿನ ಸುಂಟಿಕೊಪ್ಪ, ಮಡಿಕೇರಿ ಮತ್ತು ಕಡಗದಾಳು ಸುತ್ತಮುತ್ತ ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು ಸಿಡಲು ಸಹಿತ ಆಲಿಕಲ್ಲು ಮಳೆಯಾಗಿದೆ.

ಹಿಂದೂ ಮಹಾಸಾಗರದ ಪೂರ್ವಭಾಗ ಮತ್ತು ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಮಳೆಯಾಗಿದ್ದು, ಮುಂದಿನ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಇರುವುದಿಂದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಇರಲು ಕೊಡಗು ಜಿಲ್ಲಾಡಳಿತ ಮನವಿ ಮಾಡಿದೆ.

ಇತ್ತ ಮಂಡ್ಯದ ಜಿಲ್ಲೆಯ ಪಾಂಡವಪುರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಭಾರಿ ಬಿರುಗಾಳಿಗೆ ವಿದ್ಯುತ್ ಕಂಬಗಳು, ಈಚಲು ಮರ ಮುರಿದು ಬಿದ್ದಿರುವ ಘಟನೆ ಪಾಂಡವಪುರ ಪಟ್ಟಣದ ಕೆಆರ್ ಎಸ್ ರಸ್ತೆಯಲ್ಲಿ ನಡೆದಿದೆ. ಸಂಜೆ ವೇಳೆಗೆ ಬೀಸಿದ ಬಿರುಗಾಳಿ ಹಿನ್ನೆಲೆಯಲ್ಲಿ ಎರಡು ವಿದ್ಯುತ್ ಕಂಬಗಳು ಹಾಗೂ ಈಚಲು ಮರಗಳು ರಸ್ತೆ ವೇಳೆ ಉರುಳಿ ಬಿದಿದ್ದು, ಈ ಸಮಯದಲ್ಲಿ ವಾಹನ ಓಡಾಟ ಕಡಿಮೆ ಇದ್ದ ಪರಿಣಾಮ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಭಾಗದಲ್ಲಿ ಬಿರುಗಾಳಿಗೆ ಪದೇ ಪದೇ ವಿದ್ಯುತ್ ಕಂಬಗಳು ಬೀಳುತ್ತಿದ್ದು, ವಿದ್ಯುತ್ ನಿಗಮದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.

ಚಾಮರಾಜನಗರದ ಬಂಡಿಪುರ, ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲೂ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಕಂಗೆಟ್ಟ ಜನರಿಗೆ ವರುಣ ತಂಪೆರೆದಿದ್ದಾನೆ. ಕಳೆದೆರಡು ತಿಂಗಳಿನ ಹಿಂದೆ ಅರಣ್ಯ ಪ್ರದೇಶಕ್ಕೆ ಕಾಡ್ಗಿಚ್ಚು ಬಿದ್ದಿದ್ದ ಪರಿಣಾಮ ಅಪಾರ ಅರಣ್ಯ ಸಂಪತ್ತು ನಾಶವಾಗಿತ್ತು. ಸದ್ಯ ಮಳೆಯಾಗಿರುವ ಪರಿಣಾಮ ವನ್ಯ ಜೀವಿಗಳತ್ತ ವರುಣ ಕರುಣೆ ತೋರಿದ್ದಾನೆ.

ಫಾನಿ ಚಂಡಮಾರುತ ಹಿನ್ನೆಲೆ ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು. ಚಂಡಮಾರತ ಹಿನ್ನೆಲೆ ಹವಾಮಾನ ವೈಪರೀತ್ಯ ಉಂಟಾಗುವ ಸಾಧ್ಯತೆಗಳಿದ್ದು, ಇಂದು, ನಾಳೆ ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಾಗಿ, ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಏ. 29 ಅಥವಾ 30 ಎರಡು ದಿನಗಳ ಕಾಲ ಸಾಧಾರಣ ಮಳೆ ಸಾಧ್ಯತೆ ಇದ್ದು, ಆದಷ್ಟು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಇದನ್ನು ಓದಿ: ‘ಫಾನಿ’ ಸೈಕ್ಲೋನ್ ಎಫೆಕ್ಟ್ – ಕೇರಳದಲ್ಲಿ ಹೈ ಅಲರ್ಟ್

Share This Article
Leave a Comment

Leave a Reply

Your email address will not be published. Required fields are marked *