ಜೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರ ಜಲಾವೃತ

Public TV
1 Min Read

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ 24 ಗಂಟೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು, ವ್ಯಾಪಾರಸ್ಥರು ಪರದಾಡುತ್ತಿದ್ದಾರೆ.

ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಇಲ್ಲಿನ 33 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರ ಜಲಾವೃತವಾಗಿದ್ದು, ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಮಳೆಯ ಆರ್ಭಟದ ಜೊತೆಗೆ ಎನ್ ಆರ್‌ಬಿಸಿ ಕಾಲುವೆ ನೀರು ವಿದ್ಯುತ್ ಕೇಂದ್ರಕ್ಕೆ ನುಗ್ಗಿದೆ. ಇದರಿಂದ ಸುಮಾರು 5 ಅಡಿಯಷ್ಟು ನೀರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿಂತಿದ್ದು, ಹೈವೊಲ್ಟೇಜ್ ಟ್ರಾನ್ಸ್ ಫಾರ್ಮರ್‌ಗಳು ನೀರಿನಲ್ಲಿ ಮುಳುಗಿವೆ. ಪರಿಣಾಮ ವಿದ್ಯುತ್ ವಿತರಣೆ ಸ್ಥಗಿತಗೊಳಿಸಲಾಗಿದೆ.

ಹೀಗಾಗಿ ಕಳೆದ 24 ಗಂಟೆಯಿಂದ ಕರೆಂಟ್ ಇಲ್ಲದೆ ಜಾಲಹಳ್ಳಿ ಪಟ್ಟಣ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಜೆಸ್ಕಾಂ ಅಧಿಕಾರಿಗಳು ತಕ್ಷಣ ಎಚ್ಚೆತ್ತು ವಿದ್ಯುತ್ ಪೂರೈಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇತ್ತ ಕೃಷ್ಣಾ ನದಿ ಪ್ರವಾಹ ಇಳಿಕೆಯಾದರೂ ಅದರ ಪರಿಣಾಮಗಳು ಮಾತ್ರ ಮುಂದುವರಿದಿವೆ. ಪ್ರವಾಹ ಇಳಿಕೆ ಹಿನ್ನೆಲೆಯ ಗ್ರಾಮಗಳಿಗೆ ನುಗ್ಗಿದ್ದ ನೀರು ಹರಿದು ಹೋಗಿದೆ. ಆದರೆ ಗ್ರಾಮಗಳು ಈಗ ಕೆಸರಿನಿಂದ ತುಂಬಿಕೊಂಡಿದ್ದು ಜನ ಓಡಾಡಲು ಕಷ್ಟವಾಗಿದೆ. ಲಿಂಗಸುಗೂರಿನ ಕಡದರಗಡ್ಡೆ ಶಾಲಾ ಆವರಣ ಕೆಸರುಗದ್ದೆಯಂತಾಗಿದೆ.

ದೇವದುರ್ಗದ ಹೂವಿನಹೆಡಗಿ ಸೇತುವೆ ಬಳಿ ಇದ್ದ ನಾಲ್ಕು ಹೋಟೆಲ್‍ಗಳು ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿದ್ದು, ಅವಶೇಷಗಳು ಮಾತ್ರ ಉಳಿದಿವೆ. ಜಿಲ್ಲೆಯ ಹೂವಿನ ಹೆಡಗಿ, ಜಲದುರ್ಗಾ ಹಾಗೂ ಯರಗೋಡಿಯ ಸೇತುವೆಗಳು ಈಗ ಸಂಚಾರಕ್ಕೆ ಮುಕ್ತವಾಗಿವೆ. ಆದರೆ ಸತತ ಹದಿನೈದು ದಿನಗಳ ನೀರಿನ ರಭಸಕ್ಕೆ ಸೇತುವೆಗಳು ಅಲ್ಲಲ್ಲಿ ಶಿಥಿಲಗೊಂಡಿದ್ದು, ತಾತ್ಕಾಲಿಕ ರಿಪೇರಿ ಕಾರ್ಯ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *