ಮುಂಜಾನೆಯಿಂದ್ಲೇ ಹಲವೆಡೆ ಧಾರಾಕಾರ ಮಳೆ – ಅಗತ್ಯ ವಸ್ತುಗಳ ಖರೀದಿಗೆ ಪ್ರಯಾಸ

Public TV
1 Min Read

– ಧರೆಗುರುಳಿದ ಮರ, ಪಾರ್ಕಿಂಗ್ ಲಾಟ್‍ಗೆ ನುಗ್ಗಿದ ನೀರು

ಬೆಂಗಳೂರು: ಇಂದು ಮುಂಜಾನೆ ಬೆಂಗಳೂರು ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಇಂದು ಮುಂಜಾನೆಯಿಂದಲೇ ಗುಡುಗು ಮತ್ತು ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಮೆಜೆಸ್ಟಿಕ್, ಚಿಕ್ಕಪೇಟೆ, ಎಂಜಿ ರಸ್ತೆ, ಸದಾಶಿವನಗರ ಸುತ್ತಮುತ್ತ ಭಾರಿ ಮಳೆಯಾಗಿದೆ. ಆದರೆ ಮಳೆ ಅನಾಹುತಗಳ ಬಗ್ಗೆ ಅಪ್‍ಡೇಟ್ ಪಡೆಯಬೇಕಿದ್ದ ಕಂಟ್ರೋಲ್ ರೂಂಗೆ ಕರೆ ಮಾಡಿದರೆ ಯಾರೂ ಕೂಡ ರಿಸೀವ್ ಮಾಡುತ್ತಿಲ್ಲ.

ಇನ್ನೂ ಮಳೆಯಿಂದ ಯಶವಂತಪುರ, ಮಲ್ಲೇಶ್ವರಂ ಸೇರಿದಂತೆ ಅನೇಕ ಕಡೆ ಮರಗಳು ಧರೆಗುರುಳಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಬಳಿಯ ರಾಯನಕಲ್ಲು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ವರುಣ ಜನರಿಗೆ ತಂಪೆರೆದಿದ್ದಾನೆ. ಇದರಿಂದ ಮಳೆ ನೀರಿಗೆ ಕಾಲುವೆಗಳು ತುಂಬಿ ಹರಿಯುತ್ತಿವೆ. ಆದರೆ ಬೆಂಗಳೂರಿನ ಸಹಕಾರದ ಮದರ್ ಹುಡ್ ಆಸ್ಪತ್ರೆ ಪಾರ್ಕಿಂಗ್ ಲಾಟ್‍ಗೆ ನೀರು ನುಗ್ಗಿದೆ.

ಕೊಡಗು ಜಿಲ್ಲೆಯಾದ್ಯಂತ ರಾತ್ರಿ ಆರಂಭವಾದ ಗುಡುಗು ಸಹಿತ ಮಳೆ ಇನ್ನೂ ಸುರಿಯುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಜನತೆ ಅಗತ್ಯ ವಸ್ತುಗಳ ಖರೀದಿಸಲು ಪ್ರಯಾಸ ಪಡಬೇಕಾಯಿತು. ಗುರುವಾರ ತಡರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಸ್ವಲ್ಪ ತಣ್ಣಗಾಗಿ ಮುಂಜಾನೆಯೂ ತುಂತುರು ಮಳೆಯಾಗುತ್ತಿದೆ. ಮಡಿಕೇರಿ, ಕುಶಾಲನಗರ ಹಾಗೂ ಸೋಮವಾರಪೇಟೆ ಸೇರಿದಂತೆ ವಿವಿಧೆಡೆ ಸುರಿಯುತ್ತಿರುವ ಮಳೆಗೆ ಜನಜೀವನವೂ ಅಸ್ತವ್ಯಸ್ತವಾಗಿದೆ.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ವಾರದಲ್ಲಿ ಮೂರು ದಿನಗಳು ಮಾತ್ರ ನಿಗದಿತ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ನಡುವೆ ನಿರಂತರ ಸುರಿಯುತ್ತಿರುವ ಮಳೆಯಿಂದ ಜನತೆ ಅಗತ್ಯ ವಸ್ತುಗಳನ್ನು ಖರೀದಿಸಲು ತೊಂದರೆ ಅನುಭವಿಸಿದರು. ಜನ ದಟ್ಟಣೆಯಿಂದ ಕೂಡಿರುತ್ತಿದ್ದ ತರಕಾರಿ ಹಾಗೂ ದಿನಸಿ ಅಂಗಡಿಗಳಲ್ಲಿ ಗ್ರಾಹಕರ ವಿರಳತೆ ಕಂಡು ಬಂದಿದ್ದು, ಕೆಲವರು ಮಳೆಯಲ್ಲಿ ಕೊಡೆ ಆಶ್ರಯಿಸಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *