ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆಯೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಇಂದು (ಸೋಮವಾರ) ಸಹ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ.
ಭಾನುವಾರ (ನಿನ್ನೆ) ಸಂಜೆಯಿಂದ ರಾತ್ರಿವರೆಗೆ ಬೆಂಗಳೂರಿನ (Bengaluru) ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿತ್ತು (Rain). ವರ್ತೂರು ರಸ್ತೆಯಲ್ಲಿ ಮಳೆ ನೀರು ನಿಂತು ಗುಂಜೂರು ಕಡೆಗೆ ವಾಹನ ಸಂಚಾರ ನಿಧಾನಗತಿಯಲ್ಲಿತ್ತು.
ಕಸ್ತೂರಿನಗರ, ಹಳೆ ಮದ್ರಾಸ್ ರಸ್ತೆ, ವಿಜಯನಗರ, ಎಂ.ಜಿ ರಸ್ತೆ, ದೀಪಾಂಜಲಿನಗರ, ಮಲ್ಲೇಶ್ವರ, ಮೆಜೆಸ್ಟಿಕ್, ಹೈಗ್ರೌಂಡ್ಸ್, ಸ್ವಾತಂತ್ರ್ಯ ಉದ್ಯಾನ, ವಸಂತನಗರ, ಶಿವಾಜಿನಗರ, ರೇಸ್‌ಕೋರ್ಸ್ ರಸ್ತೆ, ಕೆ.ಆರ್ ಮಾರುಕಟ್ಟೆ, ಶಾಂತಿನಗರ, ವೈಟ್‌ಫೀಲ್ಡ್, ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿತ್ತು. ಇದರಿಂದ ಹಲವೆಡೆ ವಿದ್ಯುತ್ ವ್ಯತ್ಯಯ ಕೂಡ ಸಂಭವಿಸಿತ್ತು.
ಇಂದು ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣ ಸೃಷಿಯಾಗಿದ್ದು, ಬೆಂಗಳೂರಿನ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ ಮೈಸೂರು, ಕೋಲಾರ, ಹಾಸನ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.


