ಬೆಂಗಳೂರು: ಇನ್ನೂ 5 ದಿನ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಭಾನುವಾರ ಸಂಜೆಯಿಂದ ರಾಜ್ಯದ ಹಲವು ಕಡೆ ಮಳೆ ಸುರಿಯುತ್ತಿದೆ. ಬೆಂಗಳೂರಿನಲ್ಲಿ (Bengaluru) ಮೋಡ ಮುಸುಕಿದ ವಾತಾವರಣ ಇರಲಿದೆ. ಬೆಂಗಳೂರು ಎಚ್ ಎಎಲ್ ಬಳಿ 23.4 ಮಿ.ಮೀ, ಬೆಂಗಳೂರುನಗರ-14.4 ಮಿ.ಮೀ, ಬಜ್ಪೆ- 2.0 ಮಿ.ಮೀ, ಚಿತ್ರದುರ್ಗ-21.0 ಮಿ.ಮೀ, ಗದಗ-0.1 ಮಿ.ಮೀ ಮಳೆ ದಾಖಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ವರುಣಾದೇವ ತಂಪೆರೆದಿದ್ದಾನೆ. ಗುಡುಗು, ಮಿಂಚು ಸಹಿತ ನಗರದ ಅನೇಕ ಕಡೆ ಸಾಧಾರಣ ಮಳೆಯಾಗಿದೆ.. ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ ಶೇಷಾದ್ರಿಪುರಂ, ಬಸವೇಶ್ವರ ನಗರ, ಮೆಜೆಸ್ಟಿಕ್, ಮಾಗಡಿರೋಡ್ ವಿಜಯನಗರ ಚಿಕ್ಕಪೇಟೆ ಸೇರಿದಂತೆ ಹಲವೆಡೆ ಮಳೆಯಾಗಿದೆ.
ರಾಯಚೂರಿನಲ್ಲಿ ರಾತ್ರಿ ಇಡೀ ಗುಡುಗು ಸಹಿತ ಭಾರೀ ಮಳೆಯಾಗಿದೆ. ನಗರದಲ್ಲಿ ಈ ಬೇಸಿಗೆಯಲ್ಲೇ ಮೊದಲ ಬಾರಿಗೆ ವರುಣನ ದರ್ಶನವಾಗಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಸುಮಾರು 5 ಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ಇಡೀ ರಾಯಚೂರು ನಗರದಾದ್ಯಂತ ವಿದ್ಯುತ್ ವ್ಯತ್ಯಯವಾಗಿದೆ. ಇದನ್ನೂ ಓದಿ: ನಟ ಚೇತನ್ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ – ವೀಡಿಯೋ ವೈರಲ್!
ಯಾದಗಿರಿ ಜಿಲ್ಲೆಯಲ್ಲಿ ನಸುಕಿನ ಜಾವ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಯಾದಗಿರಿ ನಗರದ ಸುಭಾಷ್ ವೃತ್ತದ ಸಮೀಪದಲ್ಲಿರುವ ಪಿಡಬ್ಲೂಡಿ ಕಚೇರಿ ಆವರಣ ಹಾಗೂ ಮನೆಯೊಂದರ ಆವರಣದೊಳಗೆ ಮಳೆ ನೀರು ನುಗ್ಗಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಜಿಟ ಜಿಟಿ ಮಳೆಯಿಂದಾಗಿ ಬಿಸಿಲೂರು ಯಾದಗಿರಿ ಮಲೆನಾಡಿನಂತಾಗಿದೆ.