ಸಾಲು ಸಾಲು ರಜೆಯ ಜೊತೆ ಭಾರೀ ಮಳೆ- ಶಾಪಿಂಗ್ ಮೂಡ್‍ನಲ್ಲಿದ್ದರಿಗೆ ನಿರಾಸೆ

Public TV
1 Min Read

ಬೆಂಗಳೂರು: ನಗರದಲ್ಲಿ ಸಂಜೆ ಹೊತ್ತಿಗೆ ಸುರಿದ ಮಳೆಯಿಂದಾಗಿ ಜನರು ಪರದಾಟ ನಡೆಸಿದ್ದು, ಹಬ್ಬದ ಶಾಪಿಂಗ್ ಮೂಡ್‍ನಲ್ಲಿದ್ದ ಜನ ನಿರಾಸೆ ಅನುಭವಿಸಿದ್ದಾರೆ. ಇತ್ತ ಊರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಜನರು ಟ್ರಾಫಿಕ್ ಸಮಸ್ಯೆಯಿಂದ ಹೈರಾಣದರು.

ನಗರದ ಪ್ರಮುಖ ಭಾಗಗಳಾದ ಕಾರ್ಪೊರೇಷನ್ ಸರ್ಕಲ್, ಗಾಂಧಿನಗರ, ಜೆ ಸಿ ನಗರದಲ್ಲಿ ಮಳೆಯಿಂದ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದರು. ಕೆ.ಆರ್ ಸರ್ಕಲ್, ಕೋರಮಂಗಲ, ಓಕಳಿಪುರಂ ಅಂಡರ್‍ಪಾಸ್ ಬಳಿಯೂ ಮಳೆ ನೀರಿನಿಂದ ಜನರು ಸಮಸ್ಯೆ ಎದುರಿಸಿದರು. ಉಳಿದಂತೆ ಪ್ಯಾಲೇಸ್ ಗುಟ್ಟಹಳ್ಳಿ, ಯು.ಬಿ ಸಿಟಿ, ಚಾಮರಾಜಪೇಟೆ, ಯಶವಂತರಪುರ, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವರುಣನ ಸಿಂಚನ ಆಗಿದೆ.

ಸಂಜೆ ವೇಳೆಗೆ ಮಳೆ ಆರಂಭವಾದ ಕಾರಣ ಭರ್ಜರಿ ವ್ಯಾಪಾರ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳ ಮುಖದಲ್ಲೂ ಆತಂಕ ಮನೆ ಮಾಡಿತ್ತು. ರಸ್ತೆ ಇಕ್ಕೆಲ್ಲಗಳಲ್ಲಿ ಬಾಳೆ ಕಂಬ, ಮಾವಿನ ಎಲೆಗಳು, ಕುಂಬಳಕಾಯಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಗ್ರಾಹಕರಿಲ್ಲದೇ ಕಾದು ಕುಳಿತ್ತಿದ್ದರು.

ದಸರಾ ಹಬ್ಬದ ಹಿನ್ನೆಲೆ ಆಯುಧ ಪೂಜೆ, ವಿಜಯದಶಮಿ ಹಾಗೂ ಶನಿವಾರ ಒಂದು ದಿನ ರಜೆ ಹಾಕಿಕೊಂಡರೆ ನಾಲ್ಕು ದಿನ ರಜೆ ಸಿಗುವ ಕಾರಣ ಹಬ್ಬಕ್ಕೆ ಊರಿಗೆ ತೆರಳಲು ಸಿದ್ಧರಾಗಿದ್ದ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆಯಿಂದ ಪರದಾಟ ನಡೆಸಿದರು. ಇದಕ್ಕೆ ಮಳೆಯೂ ಸಾಥ್ ನೀಡಿದ ಕಾರಣ ರಸ್ತೆಯಲ್ಲಿ ವಾಹನಗಳು ಆಮೆ ವೇಗದಲ್ಲಿ ಸಂಚಾರಿಸಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಗರದ ಮೆಜೆಸ್ಟಿಕ್, ಕೆಜಿ ರೋಡ್, ಕೆಆರ್ ಮಾರುಕಟ್ಟೆ, ಜೆಸಿ ರಸ್ತೆ, ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *