ಬೆಂಗಳೂರು: ಬರಗಾಲದ ಭೀತಿಯಲ್ಲಿರೋ ಕರ್ನಾಟಕದಲ್ಲಿ ಮಳೆ ಬಿರುಸು ಪಡೆದಿದ್ದು, ಕರಾವಳಿ ಮತ್ತು ಮಲೆನಾಡು, ಬೆಂಗಳೂರು ಸೇರಿದಂತೆ ಬಹುತೇಕ ಎಲ್ಲಾ ಕಡೆಗಳಲ್ಲಿ ಮಳೆಯಾಗುತ್ತಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 29ರವರೆಗೂ ಧಾರಾಕಾರ ವರ್ಷಧಾರೆ ಆಗಲಿದೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಸಾಧಾರಣ ಮಳೆ ಮುಂದುವರಿಯಲಿದೆ. ಇತ್ತ, ಮಳೆ ಕೊರತೆಯ ಹಿನ್ನೆಲೆಯಲ್ಲಿ ಇಂದಿನಿಂದ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ. ಬೆಂಗಳೂರಿನ ಹೆಚ್‍ಎಎಲ್ ಏರ್‍ಪೋರ್ಟಿನಲ್ಲಿರುವ ವಿಮಾನ ಇಂದು ಮೈಸೂರು ಭಾಗದಲ್ಲಿ ಮೋಡ ಬಿತ್ತನೆ ಕೈಗೊಳ್ಳಲಿದೆ.
ಇನ್ನೊಂದು ವಾರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲೂ ಮೋಡ ಬಿತ್ತನೆ ನಡೆಯಲಿದೆ. ಮಣ್ಣಿನಲ್ಲಿರುವ ತೇವಾಂಶ ಕುರಿತು ಉಪಗ್ರಹಗಳು ಕಳುಹಿಸುವ ಚಿತ್ರವನ್ನ ಆಧರಿಸಿ ಎಲ್ಲಿ ಮೋಡ ಬಿತ್ತನೆ ಮಾಡಬೇಕೆಂಬ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಳದಿ ಮತ್ತು ಕಿತ್ತಳೆ ಬಣ್ಣ ಚಿತ್ರಗಳು ಸಿಗುವ ಕಡೆಗಳಲ್ಲಿ ಮಳೆ ಕೊರತೆ ಇದೆ ಪರಿಗಣಿಸಿ ಅಲ್ಲಿ ಮೋಡ ಬಿತ್ತನೆ ನಡೆಯುತ್ತದೆ.
ಮೋಡಗಳ ಕೆಳಗೆ ಸಂಚರಿಸುವ ವಿಮಾನ ತಾನು ಹೊತ್ತು ತಂದಿರುವ ಸೋಡಿಯಂ ಕ್ಲೋರೈಡ್ ಮತ್ತು ಪೊಟಾಷಿಯಂ ಕ್ಲೋರೈಡ್ ಮಿಶ್ರಿತ ಹೊಗೆಯನ್ನ ಮೋಡಗಳ ಮೇಲೆ ಚಿಮ್ಮಿಸುತ್ತದೆ. ಆ ಮೋಡ ಕರಗಿ ಮಳೆ ಬರುತ್ತದೆ. ಇದಕ್ಕಾಗಿಯೇ 45 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ.