ಮಳೆಗೆ ಕೊಡಗು, ದಕ್ಷಿಣ ಕನ್ನಡದಲ್ಲಿ 21 ಬಲಿ- ಗುಡ್ಡ ತೆರವು, ಸೇತುವೆ ಜೋಡಣೆ ಆರಂಭ

Public TV
2 Min Read

ಮಡಿಕೇರಿ/ಮಂಗಳೂರು: ಭೀಕರ ಜಲಪ್ರಳಯದ ನಂತರ ಕೊಡಗಿನ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿತ್ತು. ಸದ್ಯ ಮಳೆ ಕೊಂಚ ಬಿಡುವು ಕೊಟ್ಟಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಕಂಡು ಕೇಳರಿಯದ ಮಹಾಮಳೆ ಕೊಡಗಿನಲ್ಲಿ ಒಟ್ಟು 16 ಜೀವಗಳನ್ನು ಬಲಿಪಡೆದಿದೆ. ಇತ್ತ ದಕ್ಷಿಣ ಕನ್ನಡದಲ್ಲಿ 5 ಮಂದಿ ಸಾವನ್ನಪ್ಪಿದ್ದು, ಗುಡ್ಡ ಕುಸಿತ, ಭೂಕುಸಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ 21ಕ್ಕೇರಿದೆ. ಆದರೆ ನಾಪತ್ತೆಯಾದವರಿಗಾಗಿ ಇನ್ನೂ ಡ್ರೋನ್ ಕ್ಯಾಮೆರಾ ಮೂಲಕ ಶೋಧಕಾರ್ಯ ಮುಂದುವರಿದಿದೆ.

ಭೀಕರ ಪ್ರವಾಹದಿಂದ ಕೊಡಗಿನ ವಿದ್ಯಾರ್ಥಿಗಳು ಕಳೆದ 12 ದಿನಗಳಿಂದ ಶಾಲಾ-ಕಾಲೇಜಿನ ಮುಖ ನೋಡಿರಲಿಲ್ಲ. ತೀವ್ರ ಹಾನಿಯಾಗಿರುವ ಭಾಗದ 61 ಶಾಲೆಗಳನ್ನ ಬಿಟ್ಟು ಉಳಿದ ಕಡೆ ಶಾಲಾ ಕಾಲೇಜುಗಳು ಇಂದಿನಿಂದ ಪುನಾರಂಭಗೊಳ್ಳುತ್ತಿದೆ. ಅಲ್ಲದೇ ಪರಿಹಾರ ಕೇಂದ್ರಗಳಲ್ಲಿ ಮಕ್ಕಳಿಗೆ ಶಾಲಾ ಪಠ್ಯ ಚಟುವಟಿಕೆ ಆರಂಭಿಸಲಾಗಿದೆ.


ಜಿಲ್ಲೆಯ ವಾತಾವರಣ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಗುಡ್ಡ ತೆರವು, ಸೇತುವೆ ಜೋಡಣೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳು ಆರಂಭವಾಗ್ತಿದೆ. ಅಲ್ಲದೇ 10 ದಿನಗಳಿಂದ ಕತ್ತಲಲ್ಲಿರುವ ಮಡಿಕೇರಿಯಲ್ಲಿ ವಿದ್ಯುತ್ ಕಂಬಗಳ ದುರಸ್ಥಿ ಕಾರ್ಯ ಶುರುವಾಗಿದೆ. ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಸೇರಿದಂತೆ ಹಲವು ಭಾಗಗಳ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ನಡುವೆ ಸರ್ಕಾರ ಕೂಡ ಪುನರ್ವಸತಿ ಕಾರ್ಯಗಳನ್ನು ತ್ವರಿತವಾಗಿ ಮಾಡುತ್ತಿದ್ದು, ಅಡುಗೆ ಅನಿಲ, ಗ್ಯಾಸ್ ಗೀಜರ್, ಪೆಟ್ರೋಲ್, ಡೀಸಲ್ ಪೂರೈಕೆಯಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯ ಉಂಟಾಗದಂತೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯಾದ್ಯಂತ ಬಸ್ ಸಂಚಾರ ಹಾಗೂ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ನಿರ್ದೇಶನ ನೀಡಲಾಗಿದೆ. ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಲು ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ರಕ್ಷಣಾ ತಡೆಗೋಡೆ ನಿರ್ಮಿಸಲು ಮರಳು ಚೀಲಗಳನ್ನು ಬಳಸುವ ಮೂಲಕ ತಾತ್ಕಾಲಿಕ ಪರಿಹಾರ ಕಾಮಗಾರಿ ಕೈಗೊಳ್ಳಲು ಸಂಬಂಧಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯ ನೈಸರ್ಗಿಕ ವಿಕೋಪ ಇಲಾಖೆ ಮತ್ತು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ತಂಡ ಜೋಡುಪಾಲ, ಅರೇಕಲ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ದುರಂತ ನಡೆದಿರುವ ಮದೆನಾಡು, ಜೋಡುಪಾಲ, ಅರೇಕಲ್ ಪ್ರದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಇನ್ನು ಇಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರವಾಹ ಪೀಡಿತ ಮಡಿಕೇರಿಗೆ ಭೇಟಿ ನೀಡಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=_MN3-brd8f0

Share This Article
Leave a Comment

Leave a Reply

Your email address will not be published. Required fields are marked *