ರಾಜ್ಯದ ಹಲವೆಡೆ ಮಳೆ ಅಬ್ಬರ; ಧರೆಗುರುಳಿದ ಮರ, ವಿದ್ಯುತ್ ಕಂಬಗಳು – ಎಲ್ಲೆಲ್ಲಿ ಏನಾಗಿದೆ?

Public TV
2 Min Read

– ಬೆಂಗಳೂರಲ್ಲೂ ಧಾರಾಕಾರ ಮಳೆ; ಕೆಲವೆಡೆ ಬೆಳೆ ನಾಶ

ಬೆಂಗಳೂರು: ಕಾದ ಕಾವಲಿಯಂತಾಗಿದ್ದ ಬೆಂಗಳೂರಿಗೆ (Bengaluru Rains) ವರುಣದೇವ ಆಗಮಿಸಿದ್ದ. ನಿನ್ನೆ ಸಂಜೆ ವೇಳೆಗೆ ಶುರುವಾದ ಮಳೆ ತಡರಾತ್ರಿ ವರೆಗೂ ಸುರಿದಿದೆ. ರಾಜ್ಯದ ಹಲವೆಡೆ ರಾತ್ರಿ ಮಳೆ ಅಬ್ಬರ ಜೋರಾಗಿ ಅವಾಂತರ ಸೃಷ್ಟಿ ಮಾಡಿದೆ.

ಬೆಂಗಳೂರಿನ ಬಸವನಗುಡಿ, ಕಾರ್ಪೊರೇಷನ್, ಟೌನ್‌ಹಾಲ್, ಮೆಜೆಸ್ಟಿಕ್, ಗೊರಗುಂಟೆ ಪಾಳ್ಯ, ಜಾಲಹಳ್ಳಿ, ಸುಮ್ಮನಹಳ್ಳಿ, ಯಶವಂತಪುರ, ಮಹಾಲಕ್ಷ್ಮಿಲೇಔಟ್‌, ವಿಜಯನಗರ, ನಾಗರಬಾವಿ, ಚಾಮರಾಜಪೇಟೆ ಸೇರಿದಂತೆ ಹಲವೆಡೆ ಸಂಜೆ ವೇಳೆಗೆ ಧಾರಾಕಾರವಾಗಿ ಮಳೆ ಸುರಿಯಿತು. ಇದನ್ನೂ ಓದಿ: ಕೊಡಗಿನಲ್ಲಿ SSLC ವಿದ್ಯಾರ್ಥಿನಿಯ ತಲೆ ಕತ್ತರಿಸಿ ಬರ್ಬರ ಕೊಲೆ!

ಮಳೆಗೆ ರಸ್ತೆಗಳು ಜಲಾವೃತವಾಗಿತ್ತು. ಒಕಳೀಪುರಂ ಅಂಡರ್‌ಪಾಸ್‌ನಲ್ಲಿ 2 ಅಡಿಯಷ್ಟು ನೀರು ನಿಂತು ಸವಾರರು ಪರದಾಡಿದರು. ಕಂಟೋನ್ಮೆಂಟ್ ರೈಲ್ವೆ ಅಂಡರ್ ಪಾಸ್‌ನಲ್ಲೂ ನೀರು ನಿಂತುಕೊಂಡಿತ್ತು. ಇನ್ನು ಮೈಸೂರು ರಸ್ತೆಯಲ್ಲಿ ನದಿಯಂತಾಗಿದ್ದ ರಸ್ತೆಯಲ್ಲಿ ವಾಹನ ಸವಾರರು ನಿಧಾನಗತಿಯಲ್ಲಿ ಚಲಿಸುತ್ತಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಏರ್‌ಪೋರ್ಟ್ ರಸ್ತೆ ಮಾರ್ಗದಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.

ನೆಲಮಂಗಲ ಸುತ್ತಮುತ್ತ ಭಾರಿ ಮಳೆ ಆಗಿದೆ. ಅರಿಶಿನಕುಂಟೆ, ಮಾಕಳಿ, ಮಾದನಾಯಕನಹಳ್ಳಿ ಬಳಿ ಸಂಚಾರ ದಟ್ಟಣೆ ಆಗಿತ್ತು. ನೆಲಮಂಗಲ ನಗರದ ಭೈರವೇಶ್ವರ ಬಡಾವಣೆಯಲ್ಲಿ, ರಾಜಕಾಲುವೆ ತುಂಬಿ ಮನೆಗಳಿಗೆ ಮಳೆ ನುಗ್ಗಿತ್ತು. ಇದನ್ನೂ ಓದಿ: ಡಾ. ಕೆ.ಎಸ್‌ ರಾಜಣ್ಣ ಪದ್ಮಶ್ರೀ ಸ್ವೀಕಾರ- ಹೃದಯ ಸ್ಪರ್ಶಿ ವೀಡಿಯೋ ಹಂಚಿಕೊಂಡ ಶೋಭಾ ಕರಂದ್ಲಾಜೆ

ಬೆಂಗಳೂರು ಅಷ್ಟೇ ಅಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲೂ ಭಾರೀ ಮಳೆ ಆಗಿದೆ. ರಾಯಚೂರು, ಬಳ್ಳಾರಿ, ಮಡಿಕೇರಿ, ಹಾಸನ, ತುಮಕೂರು ಭಾಗದಲ್ಲಿ ಮಳೆ ಆಗಿದೆ. ರಾಯಚೂರಿನ ಮಾನ್ವಿಯಲ್ಲಿ ಬಿರುಗಾಳಿ ಸಹಿತ ಜೋರು ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆಗಳು ಜಲಾವೃತವಾಗಿದ್ದವು. ಜೋರು ಗಾಳಿಗೆ ಪಟ್ಟಣದ ಹಲವೆಡೆ ಜಾಹೀರಾತು ಫಲಕಗಳು ಮುರಿದು ಬಿದ್ದವು. ಇನ್ನು ಬಿರುಗಾಳಿ ಸಮೇತ ಸುರಿದ ಮಳೆ ಪರಿಣಾಮ ಬಳ್ಳಾರಿಯ ಕಂಪ್ಲಿಯಲ್ಲಿ ಹತ್ತಾರು ಎಕರೆಯ ಬಾಳೆ ಸಂಪೂರ್ಣ ನೆಲಕಚ್ಚಿದೆ. ಸಂಡೂರು, ಸಿರಗುಪ್ಪ, ಹಗರಿಬೊಮ್ಮನಳ್ಳಿ, ಹೊಸಪೇಟೆ, ಬಳ್ಳಾರಿ, ಕಂಪ್ಲಿ, ಕುಡ್ಲಿಗಿ ಭಾಗದಲ್ಲಿ ಮಳೆ ಸಿಂಚನವಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಬೃಹತ್ ಮರಗಳು ಧರೆಗುರುಳಿದೆ. ಇನ್ನು ಹಾಸನ ಜಿಲ್ಲೆಯಲ್ಲಿ ಮಳೆಗೆ ಟೆಂಟ್‌ಗಳು ಹಾರಿ ಹೋಗಿವೆ. ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆ ಗ್ರಾಮದಲ್ಲಿ ಸಂತೆಗೆ ಹಾಕಿದ್ದ ಟಾರ್ಪಲ್‌ಗಳು ಹಾರಿ ಹೋಗಿದ್ದು, ವ್ಯಾಪಾರಸ್ಥರು ಪರದಾಡಿದರು. ಕೊಡುಗಿನಲ್ಲಿ ಮಳೆ ಆಗಿದ್ದು, ವಿರಾಜಪೇಟೆಯ ದೇವಾಂಗ ಬೀದಿಯ ಸತೀಶ್ ಎಂಬವರ ಮನೆ ಮೇಲೆ ಮರ ಬಿದ್ದು ಅವಾಂತರವಾಗಿದೆ. ಸುದರ್ಶನ್ ಗೆಸ್ಟ್‌ಹೌಸ್‌ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ತೆಂಗಿನ ಮರ ಬಿದ್ದಿದೆ. ಇಂದು ಸಹ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

Share This Article