ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ- ಹಾರಿಹೋದ ಮೇಲ್ಛಾವಣಿ, ಧರೆಗೆ ಉರುಳಿದ ವಿದ್ಯುತ್ ಕಂಬಗಳು

Public TV
1 Min Read

ಹಾವೇರಿ/ಮಂಡ್ಯ/ಕೋಲಾರ: ರಾಜ್ಯದಲ್ಲಿ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಲವೆಡೆ ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿದಿದೆ. ತಾಲೂಕಿನ ಶಿರಬಡಗಿ, ಹತ್ತಿಮತ್ತೂರು, ಜಲ್ಲಾಪುರ, ಕಡಕೋಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಗಾಳಿಗೆ ಮನೆಯ ಮೇಲ್ಛಾವಣಿಗಳು ಹಾರಿ ಹೋಗಿವೆ. ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಕೆಲಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಅಲ್ಲದೆ ಶಿರಬಡಗಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದರಿಂದ 50 ವರ್ಷದ ಶಂಕ್ರಪ್ಪ ಲಮಾಣಿ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಂಡ್ಯದಲ್ಲಿ ಬೀಸಿದ ಬಿರುಗಾಳಿಗೆ ಹಲವೆಡೆ ಅವಾಂತರವಾಗಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಗ್ರಾಮ ಮತ್ತು ಮಂಡ್ಯ ತಾಲೂಕು ದುದ್ದ ಹೋಬಳಿ ಬಿಲ್ಲೇನಹಳ್ಳಿ ಗ್ರಾಮದಲ್ಲಿ ಲೈಟ್ ಕಂಬಗಳು ಧರೆಗುರುಳಿದೆ. ಅಲ್ಲದೆ ಮನೆಯ ಮೇಲ್ಛಾವಣಿಗಳು ಹಾರಿ ಹೋಗಿವೆ. ಭಾನುವಾರ ಸಂಜೆ ಬೀಸಿದ ಬಿರುಗಾಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.

ಇನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಹಾಗೂ ಮಳೆಗೆ ಬೆಳೆ ನಾಶವಾಗಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ರೈತ ಗವಿಗೌಡರ ಮೂರು ಎಕರೆ ಪಪ್ಪಾಯಿ ಬೆಳೆ ನಾಶವಾಗಿದೆ. ರವಿ ಎಂಬವವರ ಎರಡು ಎಕರೆ ಪಪ್ಪಾಯಿ ಬೆಳೆ ನಾಶವಾಗಿದ್ದು, ರೈತ ಚಲುವೇಗೌಡರ ನಿರ್ಮಾಣ ಹಂತದಲ್ಲಿದ್ದ ಕೋಳಿಫಾರಂ ಧರೆಗುರುಳಿದೆ. ಸುಮಾರು 20 ಲಕ್ಷ ರೂ.ಗೆ ಹೆಚ್ಚು ನಷ್ಟವಾಗಿದೆ. ಬಿರುಗಾಳಿ ಮಳೆಗೆ ರೈತ ಕಂಗಾಲಾಗಿದ್ದಾರೆ.

ಕೋಲಾರದಲ್ಲೂ ಬೀಸಿದ ಬಿರುಗಾಳಿಗೆ ನೂರು ವರ್ಷಗಳಷ್ಟು ಪುರಾತನ ಅರಳಿ ಮರ ಧರೆಗೆ ಬಿದ್ದಿದೆ. ಕೋಲಾರ ತಾಲೂಕು ಕೆ. ಮಲ್ಲಾಂಡಹಳ್ಳಿ ಗ್ರಾಮದ ಅಶ್ವಥ ಕಟ್ಟೆಯಲ್ಲಿದ್ದ ಅರಳಿಮರ ಕಳೆದ ರಾತ್ರಿ ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಮರ ಗ್ರಾಮದ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಗ್ರಾಮದ ಜನರಿಗೆ ರಸ್ತೆ ಸಂಪರ್ಕ ಬಂದ್ ಆಗಿದೆ. ಕೂಡಲೇ ಅರಣ್ಯ ಇಲಾಖೆಯವರು ಮರ ತೆರವುಗೊಳಿಸುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *