Shiradi Ghat: ವರುಣನ ಆರ್ಭಟ; ಶಿರಾಡಿಘಾಟ್ ರಸ್ತೆ ತಾತ್ಕಾಲಿಕ ಬಂದ್ – ಸಂಚಾರಕ್ಕೆ ಬದಲಿ ಮಾರ್ಗ!

By
2 Min Read

– ಗುಡ್ಡ ಕುಸಿತದಿಂದ 10 ಕಿಮೀ ಟ್ರಾಫಿಕ್‌ ಜಾಮ್‌!

ಹಾಸನ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ (Bengaluru, Mangaluru Highway) ಹಲವೆಡೆ ಗುಡ್ಡ, ತಡೆಗೋಡೆ ಕುಸಿತ ಸಂಭವಿಸುತ್ತಿವೆ. ಈ ಹಿನ್ನಲೆ ತುರ್ತು ದುರಸ್ತಿ ಕಾರ್ಯ ನಡೆಸಬೇಕಿದ್ದು, ಹಾಸನದಿಂದ (Hassan) ಮಾರನಹಳ್ಳಿವರೆಗೆ ತುರ್ತು ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಮಳೆಯ ಆರ್ಭಟದಿಂದ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್‌ನಲ್ಲಿ (Shiradi Ghat) ಗುಡ್ಡ ಕುಸಿತ ಸಂಭವಿಸಿದ್ದು, ತಾತ್ಕಾಲಿಕವಾಗಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಗುರುವಾರ (ಜು.18) ನಸುಕಿನ ಜಾವ ನಡೆದ ಘಟನೆಯಿಂದಾಗಿ 10 ಕಿಮೀ ವರೆಗೆ ಟ್ರಾಫಿಕ್‌ ಜಾಮ್‌ ಆಗಿದ್ದು, ಟ್ರಕ್‌, ಲಾರಿ, ಟ್ರ್ಯಾಕ್ಟರ್‌ ಮೊದಲಾದ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿದೆ. ಹಾಸನದ ಕುಂದಲಿ ಗ್ರಾಮದ ಬಳಿಯೇ ಪೊಲೀಸರು ವಾಹನಗಳನ್ನ ತಡೆದು ನಿಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ತುಘಲಕ್ ಆಡಳಿತ ಇಲ್ಲ, ಸಿದ್ದರಾಮಯ್ಯ ಸರ್ಕಾರವೇ ಇರೋದು: ಬಿಜೆಪಿಗೆ ಸಿಎಂ ತಿರುಗೇಟು

ಅತ್ತ ಚಾರ್ಮಾಡಿ ಘಾಟ್‌ನಲ್ಲೂ ಪ್ರಯಾಣ ದುಸ್ಥರ ಹಿನ್ನೆಲೆಯಲ್ಲಿ ಹಾಸನದಲ್ಲಿಯೇ ವಾಹನ ನಿಲ್ಲಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಸಕಲೇಶಪುರದವರೆಗೆ ತೆರಳುವ ಸಾರಿಗೆ ಬಸ್‌ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಂಗಳೂರು ಕಡೆಗೆ ಹೋಗುವ ಬಸ್‌ಗಳಿಗೂ ಹಾಸನ ತಾಲ್ಲೂಕಿನ ಕಂದಲಿ ಬಳಿ ತಡೆದು ವಾಪಸ್‌ ಕಳುಹಿಸುತ್ತಿದ್ದಾರೆ. ಸದ್ಯ ವಾಹನ ಸಂಚಾರಕ್ಕೆ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ತಡೆ ನೀಡಲಾಗಿದ್ದು, ರಸ್ತೆಗೆ ಕುಸಿದ ಮಣ್ಣು ತೆರವು ಮಾಡಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಜಲ್‌ ಖಾನ್‌ ಕೊಲ್ಲಲು ಛತ್ರಪತಿ ಶಿವಾಜಿ ಬಳಿಸಿದ್ದ ‘ವಾಘ್‌ ನಖ್‌’ ಅಸ್ತ್ರ ಜು.19ಕ್ಕೆ ಲಂಡನ್‌ನಿಂದ ಭಾರತಕ್ಕೆ

ಈ ಕುರಿತು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಆದೇಶ ಹೊರಡಿಸಿದ್ದು, ಶುಕ್ರವಾರ ಬೆಳಗ್ಗೆಯಿಂದ ದುರಸ್ತಿ ಕಾರ್ಯಗಳು ಮುಗಿಯುವವರೆಗೂ ಮುನ್ನೆಚ್ಚರಿಕೆ ಕ್ರಮ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹಾಸನ ಜಿಲ್ಲೆ ಮಾರ್ಗವಾಗಿ ಬೆಂಗಳೂರು-ಮಂಗಳೂರ ನಡುವೆ ಪ್ರಯಾಣಿಸುವ ವಾಹನಗಳು ಹಾಸನ, ಬೇಲೂರು, ಮೂಡಿಗೆರೆ, ಚಾರ್ಮಾಡಿ ಮಾರ್ಗವಾಗಿ ಸಂಚಿರಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯದ ಅಂಗಡಿಗೆ ಪರವಾನಗಿ ನೀಡಲು ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದಾರೆ – ಕಾಂಗ್ರೆಸ್‌ ಸದಸ್ಯ ಬಾಂಬ್‌!

Share This Article