ಕಸಾಯಿಖಾನೆಗೆ ಸಾಗಿಸಿದ್ದ 15 ಹಸುಗಳ ರಕ್ಷಣೆ – ಠಾಣೆಯಲ್ಲಿಯೇ ಮೇವು ಹಾಕಿ ಸಾಕುತ್ತಿದ್ದಾರೆ ಪೊಲೀಸರು

Public TV
2 Min Read

ರಾಯಚೂರು: ಅಕ್ರಮವಾಗಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದ ಜಾನುವಾರುಗಳನ್ನು ರಾಯಚೂರು ಪೊಲೀಸರು ರಕ್ಷಿಸಿ, ಅವುಗಳನ್ನು ಎಲ್ಲಿ ಬಿಡುವುದು ಅಂತ ತಿಳಿಯದೇ ಠಾಣೆಯಲ್ಲೇ ಈಗ ಸಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಬಿಡಾಡಿ ದನಗಳ ಹಾವಳಿ ನಗರದಲ್ಲಿ ಮಿತಿಮೀರಿದ್ದರೆ, ಇನ್ನೊಂದೆಡೆ ಕಸಾಯಿಖಾನೆಯಲ್ಲಿ ಸಿಕ್ಕಸಿಕ್ಕವರು ಜಾನುವಾರುಗಳನ್ನ ತಂದು ಕತ್ತರಿಸುತ್ತಿದ್ದಾರೆ. ಕಸಾಯಿಖಾನೆ ಗುತ್ತಿಗೆಯನ್ನು ಇದುವರೆಗೂ ನಗರಸಭೆ ಅಧಿಕಾರಿಗಳು ಯಾರಿಗೂ ನೀಡಿಲ್ಲ. ಆದರೆ ಜಾನುವಾರುಗಳನ್ನು ತರುವ ಕಟುಕರಿಂದ ದುಡ್ಡುವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ಸಿಕ್ಕ ಸಿಕ್ಕ ಜಾನುವಾರುಗಳನ್ನು ಕಸಾಯಿಖಾನೆಗೆ ತರಲಾಗುತ್ತಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಸದರಬಜಾರ್ ಠಾಣೆಯ ಪೊಲೀಸರು 70 ಜಾನುವಾರುಗಳಲ್ಲಿ 15 ದನ ಹಾಗೂ ಕರುಗಳನ್ನು ರಕ್ಷಿಸಿದ್ದಾರೆ.

ನಗರದಲ್ಲಿರುವ ಬಿಡಾಡಿ ದನಗಳನ್ನೇ ಕೆಲವರು ನೇರವಾಗಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದಾರೆ. ಅಂತವರನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳದೇ ನಗರಸಭೆ ಕೈಕಟ್ಟಿ ಕುಳಿತಿದೆ. ಗುತ್ತಿಗೆ ಪಡೆಯದೇ ಸಿಕ್ಕಸಿಕ್ಕವರು ಕಸಾಯಿಖಾನೆಯಲ್ಲಿ ಜಾನುವಾರುಗಳನ್ನು ಕತ್ತರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ದನದ ಮಾಂಸ ಹಾಗೂ ಚರ್ಮ ಪಡೆದು ಉಳಿದ ತ್ಯಾಜ್ಯಗಳನ್ನು ಹಾಗೇ ಬಿಡುತ್ತಿದ್ದಾರೆ. ಇದರಿಂದಾಗಿ ಕೆಟ್ಟವಾಸನೆ ಬರುತ್ತಿದೆ. ಕಸಾಯಿಖಾನೆಯನ್ನೇ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಗರದಲ್ಲಿ ಓಡಾಡಿ ಪ್ಲಾಸ್ಟಿಕ್ ನಂತ ಪದಾರ್ಥಗಳನ್ನು ತಿನ್ನುವ ಬಿಡಾಡಿ ದನಗಳನ್ನು ಗೋಶಾಲೆಗೆ ಸೇರಿಸಿಕೊಳ್ಳಲು ಅಲ್ಲಿನ ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಇದರಿಂದಾಗಿ ಪೊಲೀಸ್ ಠಾಣೆಯಲ್ಲಿಯೇ ಹಸುಗಳು ಉಳಿದಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನಗರಸಭೆ ಆಯುಕ್ತ ರಮೇಶ್ ನಾಯಕ್ ಅವರು, ಕಸಾಯಿಖಾನೆಯಲ್ಲಿ 70 ಹಸುಗಳು ಇರುವ ಬಗ್ಗೆ ನಮಗೆ ಮಾಹಿತಿಯಿಲ್ಲ. ಅಲ್ಲಿನ ಕೆಲಸಗಾರರಿಂದ ಮಾಹಿತಿ ಪಡೆದು ಹಾಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಪಶು ಸಂಗೋಪನಾ ಇಲಾಖೆಯ ಜೊತೆಗೆ ಸೇರಿ ಬಿಡಾಡಿ ದನಗಳನ್ನು ರಕ್ಷಿತ ಸ್ಥಳಕ್ಕೆ ಸಾಗಿಸುವಂತೆ ನಮ್ಮ ಸಿಬ್ಬಂದಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ನಗರಸಭೆ ಗೋವು ರಕ್ಷಣೆಯಲ್ಲಿ ಕ್ರಮಕೈಗೊಳ್ಳುತ್ತಿಲ್ಲ. ನಗರ ಕಸಾಯಿಖಾನೆಯನ್ನು ನಿರ್ದಿಷ್ಟ ವ್ಯಕ್ತಿಗೆ ಗುತ್ತಿಗೆ ನೀಡಿಲ್ಲ. ಇದರಿಂದಾಗಿ ಅಲ್ಲಿ ಅಕ್ರಮ ನಡೆಯುತ್ತಿದೆ. ಈ ಕುರಿತು ಅನೇಕ ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಪೊಲೀಸರು ಹಸುಗಳನ್ನು ರಕ್ಷಿಸಿದ್ದಾರೆ. ಆದರೂ ಕಟುಕರು ತಮ್ಮ ಅಕ್ರಮವಾಗಿ ದನಗಳನ್ನು ಕತ್ತರಿಸವುದನ್ನು ನಿಲ್ಲಿಸಿಲ್ಲ ಎಂದು ಸ್ಥಳೀಯರಾದ ಸಂದೀಪ್ ಅವರು ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *