ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣ: ಪಿಎಸ್‍ಐ, ಪೇದೆ ಅಮಾನತು

Public TV
2 Min Read

ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣದ ಸಂಬಂಧ ಠಾಣೆಯ ಪಿಎಸ್‍ಐ ಹಾಗೂ ಪೇದೆಯನ್ನು ಅಮಾನತುಗೊಳಿಸಲಾಗಿದೆ.

ನಗರದ ಮಹಿಳಾ ಪೊಲೀಸ್ ಠಾಣೆಯ ಪಿಎಸ್‍ಐ ಬಿ.ಬಿ.ಮರಿಯಮ್ ಹಾಗೂ ಸದರ್ ಬಜಾರ್ ಠಾಣೆಯ ಪೇದೆ ಆಂಜನೇಯ ಅಮಾನತುಗೊಂಡಿದ್ದಾರೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿನಿಯ ಪೋಷಕರು ಮಗಳು ನಾಪತ್ತೆಯಾದ ಕುರಿತು ದೂರು ದಾಖಲಿಸಲು ಏಪ್ರಿಲ್ 13ರಂದು ಮಹಿಳಾ ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ಪಿಎಸ್‍ಐ ಬಿ.ಬಿ.ಮರಿಯಮ್ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ.

ಬಂಧಿತ ಆರೋಪಿ ಸುದರ್ಶನ್ ಯಾದವ್‍ನ ಮಾವ, ಸದರ್ ಬಜಾರ್ ಠಾಣೆಯ ಪೇದೆ ಆಂಜನೇಯ ಮೃತಳ ಮೊಬೈಲ್ ಹಾಗೂ ವಾಹನದ ಕೀಯನ್ನು ಪೋಷಕರಿಗೆ ಮುಂಚಿತವಾಗಿಯೇ ಹಿಂತಿರುಗಿಸಿದ್ದ. ಅಷ್ಟೇ ಅಲ್ಲದೇ ಪೇದೆ ಆಂಜನೇಯ ಅವರಿಂದ ಆರೋಪಿಯ ರಕ್ಷಣೆಯಾಗುವ ಸಾಧ್ಯತೆ ಇದೆ ಎಂದು ಮೃತ ವಿದ್ಯಾರ್ಥಿನಿಯ ಪೋಷಕರು ದೂರಿದ್ದರು. ಹೀಗಾಗಿ ಅಮಾನತುಗೊಳಿಸಲಾಗಿದೆ.

ವಿದ್ಯಾರ್ಥಿನಿಯ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಏಪ್ರಿಲ್ 16 ರಂದು ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ನೇತಾಜಿ ನಗರ ಪೊಲೀಸ್ ಠಾಣೆ ಅಧಿಕಾರಿಗೆ ಡೆತ್‍ನೋಟ್ ಸಿಕ್ಕಿತ್ತು. ಹೀಗಾಗಿ ಇದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ ಮೃತ ಮಧು ತಾಯಿ ಇದು ಆತ್ಮಹತ್ಯೆಯಲ್ಲ. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು.

ವಿದ್ಯಾರ್ಥಿನಿ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿ ಸುದರ್ಶನ್ ಯಾದವ್ ನನ್ನು ಸಿಐಡಿ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಕಾರಾಗೃಹದಿಂದ ನಾಲ್ಕು ದಿನಗಳ ಮಟ್ಟಿಗೆ ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಸಿಐಡಿ ಎಸ್.ಪಿ.ಶರಣಪ್ಪ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಮಂಗಳವಾರ ಮೃತ ವಿದ್ಯಾರ್ಥಿನಿಯ ಪೋಷಕರು ಹಾಗೂ ಆರೋಪಿಯ ಸ್ನೇಹಿತರ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ. ಇಂದು ಆರೋಪಿಯನ್ನ ರಿಮ್ಸ್ ಆಸ್ಪತ್ರೆಯಲ್ಲಿ ಪುನಃ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವಿಚಾರಣೆ ಮುಂದುವರಿಸಿದ್ದಾರೆ.

ವಿದ್ಯಾರ್ಥಿನಿ ಸಾವು ಪ್ರಕರಣದ ಹಿನ್ನೆಲೆ ನ್ಯಾಯಕ್ಕಾಗಿ ರಾಯಚೂರಿನಲ್ಲಿ ಹೋರಾಟಗಳು ನಿರಂತರವಾಗಿ ನಡೆದಿವೆ. ನಗರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ಯಾವುದೇ ಲೋಪದೋಷಕ್ಕೆ ಅವಕಾಶವಿಲ್ಲ. ತಪ್ಪಿತಸ್ಥರನ್ನ ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಅವಶ್ಯಕತೆಯಿದ್ದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬಹುದು, ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತದೆ ಎಂದು ಸಚಿವ ನಾಡಗೌಡ ಪ್ರತಿಕ್ರಿಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *