ರಾಯಚೂರು ಬಂದ್: ಕರ್ತವ್ಯಲೋಪ ಹಿನ್ನೆಲೆ ಜೂ.ಇಂಜಿನಿಯರ್ ವಜಾ

Public TV
2 Min Read

ರಾಯಚೂರು: ಕಲುಷಿತ ನೀರು ಸರಬರಾಜು ಮಾಡಿ ಮೂರು ಜೀವಗಳನ್ನು ಬಲಿ ಪಡೆದಿರುವ ರಾಯಚೂರು ನಗರಸಭೆ ವಿರುದ್ಧ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ. ಈ ಹಿನ್ನೆಲೆ ಜನರು ರಾಯಚೂರು ಬಂದ್ ಮಾಡುವ ಮೂಲಕ ಜಿಲ್ಲಾಡಳಿತಕ್ಕೂ ಬಿಸಿ ಮುಟ್ಟಿಸಿದ್ದಾರೆ. ಕರ್ತವ್ಯಲೋಪವೆಸಗಿದ ಜೂ.ಇಂಜಿನಿಯರ್‌ನನ್ನು ವಜಾ ಮಾಡಲಾಗಿದೆ.

ರಾಯಚೂರು ನಗರಸಭೆ ಸರಬರಾಜು ಮಾಡುವ ನೀರು ಕುಡಿದು ಮೂವರು ಸಾವನ್ನಪ್ಪಿದ ಹಿನ್ನೆಲೆ ರಾಯಚೂರು ನಾಗರಿಕ ವೇದಿಕೆ ಕರೆ ನೀಡಿದ್ದ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರಸಭೆಯಿಂದ ಕಲುಷಿತ ನೀರು ಸರಬರಾಜು ಮಾಡಿದ್ದರಿಂದ ನೀರು ಕುಡಿದ ನೂರಾರು ಜನ ವಾಂತಿ, ಭೇದಿ, ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಮಲ್ಲಮ್ಮ, ಅಬ್ದುಲ್ ಗಫರ್ ಮತ್ತು ನೂರು ಮೊಹಮದ್ ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಸಾರ್ವಜನಿಕರು ನಗರಸಭೆ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ:  ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು! 

ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ಜಿಲ್ಲಾಡಳಿತ ನಗರಸಭೆ ಕಿರಿಯ ಅಭಿಯಂತರ ಕೃಷ್ಣಾ ಅವರನ್ನು ಸೇವೆಯಿಂದ ವಜಾ ಮಾಡಿದೆ. ರಾಂಪೂರ ಜಲ ಶುದ್ಧೀಕರಣ ಘಟಕದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಜೆಇಯನ್ನು ಕರ್ತವ್ಯ ಲೋಪ ಹಿನ್ನೆಲೆ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ವಜಾಗೊಳಿಸಿ ಎಂದು ಆದೇಶ ಕೊಟ್ಟಿದ್ದಾರೆ.

ಜಲ ಶುದ್ಧೀಕರಣ ಘಟಕಗಳ ಸಮರ್ಪಕ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವ ರಾಯಚೂರು ನಗರಸಭೆ ಮೂರು ಜೀವಗಳನ್ನು ಬಲಿ ಪಡೆದಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವರ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಿಂದಿ ಹಿಂದುಳಿದ ರಾಜ್ಯಗಳ ಭಾಷೆ, ಇದು ಶೂದ್ರರಿಗೆ ಮಾತ್ರ: ಡಿಎಂಕೆ ಸಂಸದ

ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕರೆ ನೀಡಿದ್ದ ಬಂದ್ ಹಿನ್ನೆಲೆ ನಗರದಲ್ಲಿ ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದವು. ಉಳಿದಂತೆ ಜನಜೀವನ ಎಂದಿನಂತೆ ಸಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಆದರೆ ಮೃತರ ಸಂಬಂಧಿಕರು ಹಾಗೂ ಹೋರಾಟಗಾರರು ಮೃತ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಅನಾರೋಗ್ಯ ಪೀಡಿತರ ಆಸ್ಪತ್ರೆ ಖರ್ಚು ಭರಿಸುವಂತೆ ಆಗ್ರಹಿಸಿ ನಗರಸಭೆ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಹೋರಾಟಗಾರರು ಮನವಿ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *