ರಾಯಚೂರಿನಲ್ಲಿ ಬಿಗಿ ಭದ್ರತೆಯಲ್ಲೇ ಹೊಸ ವರ್ಷಾಚರಣೆ- ಯುವಕರಿಗೆ ಎಸ್‌ಪಿ ಖಡಕ್ ಎಚ್ಚರಿಕೆ

Public TV
1 Min Read

ರಾಯಚೂರು: ಹೊಸ ವರ್ಷಾಚರಣೆ ಹೆಸರಿನಲ್ಲಿ ಕಾನೂನು ಮೀರಿ ನಡೆದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಕುಡಿದು ವಾಹನಗಳನ್ನು ಚಲಾಯಿಸುವಂತವರನ್ನು ಪರಿಶೀಲನೆ ಮಾಡಲು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಕುಡಿದ ಮತ್ತಿನಲ್ಲಿ ವಾಹನಗಳನ್ನು ಚಲಾಯಿಸದೆ, ತಮ್ಮ ಸ್ವಂತ ವಾಹನಗಳನ್ನು ಮನೆಯಲ್ಲಿ ಬಿಟ್ಟು ಆಟೋ ಅಥವಾ ಸಾರ್ವಜನಿಕ ವಾಹನಗಳನ್ನು ಉಪಯೋಗಿಸಿ. ಕುಡಿದು ವಾಹನ ಚಲಾಯಿಸಿದಲ್ಲಿ ಸೂಕ್ತ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಸ್‍ಪಿ ಹೇಳಿದ್ದಾರೆ.

ನಗರದ ಮುಖ್ಯ ರಸ್ತೆಗಳಾದ ಸ್ಟೇಷನ್ ಸರ್ಕಲ್, ಅಂಬೇಡ್ಕರ್ ಸರ್ಕಲ್, ಗಂಜ್ ರಸ್ತೆ ಇನ್ನು ಮುಂತಾದ ಕಡೆ ವಾಹನದ ಸೈಲನ್ಸರ್ ತೆಗೆದು ಕರ್ಕಶವಾಗಿ ಶಬ್ದ ಮಾಡುತ್ತಾ, ವಾಹನ ಚಲಾಯಿಸಿ ತೊಂದರೆ ಕೊಡುವವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಮದ್ಯಪಾನ ಮಾಡಿ ಆಗಲಿ ಅಥವಾ ಹೊಸ ವರ್ಷದ ಆಚರಣೆಯ ಭರಾಟೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ಕೊಡುವವರ ಮೇಲೆ ಕ್ರಮಕೈಗೊಳ್ಳಲು ಓಬವ್ವನ ಪಡೆ ನಿರಂತರವಾಗಿ ಗಸ್ತು ಮಾಡುತ್ತದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ರಾತ್ರಿಯಿಡಿ ಗಸ್ತು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಬಂದೋಬಸ್ತ್ ನಡೆಸಲಿದ್ದಾರೆ. ರಾತ್ರಿ 10.30 ಗಂಟೆಯ ನಂತರ ಲೌಡ್ ಸ್ಪೀಕರ್ ಮತ್ತು ಪಟಾಕಿಯನ್ನು ಯಾರೂ ಹಚ್ಚ ಕೂಡದು ಎಂದು ಎಚ್ಚರಿಸಿದ್ದಾರೆ.

4 ಡಿವೈಎಸ್‍ಪಿ, 20 ಸಿಪಿಐ, 40 ಪಿಎಸ್‍ಯ, 10 ಡಿಎಆರ್, 2 ಕೆಎಸ್‍ಆರ್ ಪಿ ತುಕಡಿ ಒಟ್ಟು 250 ಪೊಲೀಸ್ ಪೇದೆಗಳು ಬಂದೋಬಸ್ತ್ ಕರ್ತವ್ಯದಲ್ಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜಿಲ್ಲಾದ್ಯಾಂತ ಶಾಂತಿ-ಸುವ್ಯಸ್ಥೆಯನ್ನು ಕಾಪಾಡಲು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಡಾ.ಸಿ.ಬಿ.ವೇದಮೂರ್ತಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *