– ಭಿಕ್ಷುಕರಿಗೆ ಊಟ, ತಿಂಡಿ ಪಾರ್ಸೆಲ್
– ಬಟ್ಟೆ ಮಾಸ್ಕ್ ವಿತರಿಸಿ ಟೈಲರ್ ಜಾಗೃತಿ
ರಾಯಚೂರು: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ. ಜನರಿಗೆ ಕುಡಿವ ನೀರು ಸಹ ಸಿಗುತ್ತಿಲ್ಲ. ಜಿಲ್ಲೆಯಲ್ಲೂ ನಿಧಾನಕ್ಕೆ ಹೊರಗೆ ಬದಿಂದ್ದ ಜನ ಮನೆ ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಯಚೂರು ನಗರ ಸೇರಿದಂತೆ ಇಡೀ ಜಿಲ್ಲೆ ಸ್ತಬ್ಧವಾಗಿದೆ. ಈ ಮಧ್ಯೆ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ಕೂಡ ತೋರಿಸುತ್ತಿದ್ದಾರೆ.
ನಗರದಲ್ಲಿ ಎಲ್ಲಾ ಹೋಟೆಲ್‍ಗಳು ಬಂದ್ ಆಗಿರುವುದರಿಂದ ಅಸ್ವಸ್ಥ ಭಿಕ್ಷುಕರು, ಬುದ್ಧಿಮಾಂದ್ಯರು, ರಸ್ತೆಬದಿಯಲ್ಲೇ ಮಲಗುವವರಿಗೆ ಊಟ ಸಿಗುತ್ತಿಲ್ಲ. ಹೀಗಾಗಿ ನಗರದ ಕೆಲವರು ಮಾನವೀಯತೆ ಮೆರೆದು ಊಟ, ತಿಂಡಿಯ ಪೊಟ್ಟಣಗಳನ್ನ ನಿರ್ಗತಿಕರಿಗೆ ಹಂಚುತ್ತಿದ್ದಾರೆ. ನಗರದ ಶಶಿಧರ ಗಡಿಗಿ ಹಾಗೂ ಸುರೇಶ್ ಈ ಇಬ್ಬರು ಸ್ನೇಹಿತರು ನಿತ್ಯ 60ಕ್ಕೂ ಅಧಿಕ ಪಾಕೆಟ್ ಗಳನ್ನು ಭಿಕ್ಷುಕರು, ನಿರ್ಗತಿಕರಿಗೆ ಹಾಗೂ ಊರಿಂದ ಬಂದು ಊಟ ಸಿಗದೆ ಇರುವವರೆಗೆ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಕೊರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಾಗುತ್ತಿದ್ದಂತೆ ನಗರದಲ್ಲಿ ಎಲ್ಲೂ ಮಾಸ್ಕ್ ಸಿಗುತ್ತಿಲ್ಲ. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿರುವ ಟೈಲರ್ ಮಹ್ಮದ್ ಮಸ್ತಾನ ಎಂಬವರು ಬಟ್ಟೆಯಿಂದ ತಾವೇ ತಯಾರಿಸಿದ 500 ಮಾಸ್ಕ್ ಗಳನ್ನು ಹಂಚುತ್ತಿದ್ದಾರೆ. ಮಾಸ್ಕ್ ಗಳು ವೈಜ್ಞಾನಿಕವಾಗಿ ವೈರಸ್ ಸೋಂಕು ಹರಡುವುದನ್ನ ತಡೆಯದಿದ್ದರೂ, ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.