ಮಾನ್ವಿಯಲ್ಲಿ ಮದ್ಯದಂಗಡಿಗಳಿಗೆ ಸೀಲ್ ಇಲ್ಲ: 4 ಪಟ್ಟು ದುಬಾರಿ ಬೆಲೆಗೆ ಮಾರಾಟ

Public TV
1 Min Read

– ಮಾಜಿ ಸಂಸದರ ಸಂಬಂಧಿಯ ಕಾರಿನಲ್ಲಿ ಮದ್ಯ ಸಾಗಾಟ

ರಾಯಚೂರು: ಮಾನ್ವಿಯಿಂದ ರಾಯಚೂರು ನಗರಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಕಾರೊಂದನ್ನು ರಾಯಚೂರು ಅಬಕಾರಿ ಪೊಲೀಸರು ಜಪ್ತಿಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.

ಮಾಜಿ ಸಂಸದ ಬಿ.ವಿ.ನಾಯಕ್ ಸಂಬಂಧಿ ಶ್ರೀನಿವಾಸ್ ನಾಯಕ್‍ಗೆ ಸೇರಿದ ಫೋರ್ಡ್ ಎಂಡಿವಿಯರ್ ಕಾರ್ (ಸಂಖ್ಯೆ ಕೆ.ಎ36 ಎಂಸಿ 0005) ನಲ್ಲಿ 750 ಎಂ.ಎಲ್‍ನ 10 ಬಾಟಲ್ ವಿಸ್ಕಿ, 650 ಎಂ.ಎಲ್‍ನ 24 ಬಾಟಲ್ ಬಿಯರ್ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ತಾಲೂಕಿನ ಕಲ್ಲೂರು ಬಳಿ ಪರಿಶೀಲನೆ ಮಾಡಿದ ಅಬಕಾರಿ ಪೊಲೀಸರು ಮದ್ಯದ ಬಾಟಲಿಗಳನ್ನ ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಕೇಶ್ ಹಾಗೂ ಅಜಯ್‍ಕುಮಾರ್ ಬಂಧಿತ ಆರೋಪಿಗಳು.

ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆಯಾದರೂ ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಮಾತ್ರ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಯಾಕೆಂದರೆ ಇಲ್ಲಿನ ಮದ್ಯದ ಅಂಗಡಿಗಳಿಗೆ ಅಬಕಾರಿ ಅಧಿಕಾರಿಗಳು ಇದುವರೆಗೂ ಸೀಲ್ ಹಾಕಿಲ್ಲ. ಮಾನ್ವಿಯ ಬಸ್ ನಿಲ್ದಾಣ ಹಾಗೂ ಸಿಂಧನೂರು ರಸ್ತೆಯಲ್ಲಿರುವ ಬಾರ್ ಗಳಿಗೆ ಕೇವಲ ಬೀಗ ಮಾತ್ರ ಹಾಕಲಾಗಿದೆ.

ಕೇವಲ ಬೀಗ ಹಾಕಿರುವುದರಿಂದ ರಾತ್ರಿ ವೇಳೆ ಮದ್ಯದಂಗಡಿಯಿಂದ ಮದ್ಯ ರಾಜಾರೋಷವಾಗಿ ಹೊರಹೋಗುತ್ತಿದೆ. ಇದರಿಂದ ಬೇಸತ್ತಿರುವ ಸ್ಥಳೀಯರು ಕೂಡಲೇ ಬಾರ್ ಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ. ತಾಲೂಕು ಅಬಕಾರಿ ಇನ್ಸ್ ಪೆಕ್ಟರ್ ಸಹಕಾರದಿಂದಲೇ ಅಗ್ಗದ ಮದ್ಯವನ್ನು ನಾಲ್ಕು ಪಟ್ಟು ದುಬಾರಿಗೆ ಮಾರಾಟ ಮಾಡಲಾಗುತ್ತಿದೆ ಅಂತ ಆರೋಪಿಸಿದ್ದಾರೆ. ಮಾನ್ವಿಯ ಮಲ್ಲಯ್ಯ ಹಾಗೂ ಸೋಮು ಎಂಬುವವರಿಗೆ ಸೇರಿದ 11 ಮದ್ಯದ ಅಂಗಡಿಗಳಿಗೆ ಮಾತ್ರ ಸೀಲ್ ಹಾಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಮಧ್ಯೆ ಕಳಭಟ್ಟಿ ಹಾಗೂ ಸಿಎಚ್ ಪೌಡರ್ ಸೇಂದಿ ಮಾರಾಟ ಕೂಡ ಜೋರಾಗಿದ್ದು ಅಬಕಾರಿ ಇಲಾಖೆ ಅಧಿಕಾರಿಗಳು ಲಿಂಗಸುಗೂರು ತಾಲೂಕಿನ ಬಗಾಡಿ ತಾಂಡದಲ್ಲಿ 250 ಕೊಡಗಳಲ್ಲಿದ್ದ 1500 ಲೀಟರ್ ಕಳ್ಳಭಟ್ಟಿ ಜಪ್ತಿ ಮಾಡಿದ್ದಾರೆ. ಮಾನ್ವಿ ತಾಲೂಕಿನ ಕುರಡಿ ಗ್ರಾಮದ ಬಳಿ 10 ಲೀಟರ್ ಕಳ್ಳಭಟ್ಟಿ ಹಾಗೂ ಒಂದು ಬೈಕ್ ಜಪ್ತಿಮಾಡಲಾಗದ್ದು ಆರೋಪಿಗಳು ಪರಾರಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *