ಮೂರು ಸಾವಿರ ದಾಳಿಂಬೆ ಗಿಡಗಳ ಸ್ಥಳಾಂತರ- ಕೋಟಿ ರೂ. ಲಾಭ ಗಳಿಸಿ ರೈತನ ಹೊಸ ಸಾಹಸ

Public TV
1 Min Read

ರಾಯಚೂರು: ದಾಳಿಂಬೆ ಬೆಳೆಯಲ್ಲಿ ಒಂದು ಕೋಟಿ ರೂ. ಲಾಭ ಗಳಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದ ರೈತರೊಬ್ಬರು, ಇದೀಗ ಮೂರು ಸಾವಿರ ದಾಳಿಂಬೆ ಗಿಡಗಳನ್ನು ಬೇರು ಸಮೇತ ಸ್ಥಳಾಂತರಿಸುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

ಜಿಲ್ಲೆಯ ಲಿಂಗಸುಗೂರಿನ ರೈತ ಬಸವರಾಜಗೌಡ ಗಣೇಕಲ್ ಅವರು ತಮ್ಮ ಇಪ್ಪತ್ತು ಎಕರೆ ಜಮೀನಿನಲ್ಲಿ ದಾಳಿಂಬೆ ಮತ್ತು ಪಪ್ಪಾಯಿ ಬೆಳೆದಿದ್ದಾರೆ. ಪಪ್ಪಾಯಿಂದ ನಷ್ಟ ಉಂಟಾದರೂ, ದಾಳಿಂಬೆಯಿಂದ ಕೋಟಿ ರೂ. ಲಾಭ ಗಳಿಸಿ, ಇತರರಿಗೆ ಮಾದರಿಯಾಗಿದ್ದರು. ಇದೀಗ ಮತ್ತೊಂದು ಸಾಹಸ ಮಾಡುವ ಮೂಲಕ ರೈತರಿಗೆ ಮಾದರಿಯಾಗಿದ್ದು, ಜಮೀನಿನಲ್ಲಿರುವ ಹೆಚ್ಚುವರಿ ದಾಳಿಂಬೆ ಗಿಡಗಳನ್ನು ಬೇರು ಸಹಿತ ಮತ್ತೊಂದು ಜಮೀನಿಗೆ ಸ್ಥಳಾಂತರಿಸಿ, ಯಶಸ್ವಿಯಾಗಿದ್ದಾರೆ.

ಈ ಮೂಲಕ ಕೃಷಿ ತಂತ್ರಜ್ಞರು ಮಾಡುವ ಕಾರ್ಯವನ್ನು ರೈತ ಬಸವರಾಜಗೌಡ ಅವರು ತಮ್ಮದೇ ಯೋಜನೆಯೊಂದಿಗೆ ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ಗಿಡಗಳನ್ನು ಸ್ಥಳಾಂತರ ಮಾಡಿದ್ದಾರೆ. ಜೆಸಿಬಿ, ಕೂಲಿಕಾರರ ಸಹಾಯದಿಂದ ಮೂರು ಸಾವಿರ ದಾಳಿಂಬೆ ಗಿಡಗಳನ್ನು ಬೇರು ಸಹಿತ ಸ್ಥಳಾಂತರಿಸಲಾಗಿದೆ.

ರೈತ ಬಸವರಾಜಗೌಡ ಅವರು ಈ ಹಿಂದೆ ಹೆಚ್ಚುವರಿಯಾಗಿದ್ದ 10ಕ್ಕೂ ಹೆಚ್ಚು ಗಿಡಗಳನ್ನು ಸ್ಥಳಾಂತರಿಸಿ, ಉತ್ತಮ ಫಸಲು ಪಡೆದಿದ್ದರು. ಅದೇ ಮಾದರಿಯಲ್ಲಿ ಇದೀಗ 3 ಸಾವಿರ ಗಿಡಗಳನ್ನು ಸ್ಥಳಾಂತರಿಸುತ್ತಿದ್ದಾರೆ. ದಾಳಿಂಬೆಯಿಂದ ನಾಲ್ಕು ವರ್ಷ ಲಾಭ ಗಳಿಸಿ, ಇಳುವರಿ ಕಡಿಮೆಯಾದ ಕಾರಣ ಗಿಡಗಳ ನಡುವೆ ಅಂತರ ಕಾಪಾಡುವುದಕ್ಕಾಗಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಗಿಡಗಳನ್ನು ಬೇರು ಸಹಿತ ಕಿತ್ತು ಬೇರೆ ಜಾಗದಲ್ಲಿ ನೆಟ್ಟು ಉತ್ತಮ ಫಸಲು ಪಡೆಯುತ್ತಿದ್ದಾರೆ. ಇದಕ್ಕಾಗಿ ಅಗತ್ಯ ಮಾಹಿತಿ ಪಡೆದು ಗೊಬ್ಬರ ಸಿಂಪರಣೆ ಸೇರಿದಂತೆ ವಿವಿಧ ತಾಂತ್ರಿಕ ನಿಯಮಗಳನ್ನು ಅನುಸರಿಸಿ ಸ್ಥಳಾಂತರ ಕಾರ್ಯ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *