ಪೌರತ್ವ ಪ್ರಮಾಣ ಪತ್ರ ಸಿಕ್ಕರೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ: ಬಾಂಗ್ಲಾ ವಲಸಿಗರ ಪರದಾಟ

Public TV
2 Min Read

ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿರುವುದರಿಂದ ಬಾಂಗ್ಲಾದೇಶದ ನಿರಾಶ್ರಿತರಿಗೆ ಇಂದಲ್ಲಾ ನಾಳೆ ದೇಶದ ಪೌರತ್ವ ಸಮಸ್ಯೆ ಬಗೆಹರಿಯಲಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ಸುಮಾರು 50 ವರ್ಷದಿಂದ ವಾಸವಿರುವ ಬಾಂಗ್ಲಾ ವಲಸಿಗರಿಗೆ ಇದುವರೆಗೂ ಜಾತಿ ಪ್ರಮಾಣ ಪತ್ರವೇ ಸಿಕ್ಕಿಲ್ಲ. ಇನ್ನೊಂದೆಡೆ ಜಮೀನುಗಳ ನಕ್ಷೆ ಇಲ್ಲದೆ ಇಲ್ಲಿನ ಜನ ನಿರಂತರ ಹೋರಾಟ ನಡೆಸಿದ್ದಾರೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಐದು ನಿರಾಶ್ರಿತರ ಪುನರ್ವಸತಿ ಕ್ಯಾಂಪ್‍ಗಳ ನಿವಾಸಿಗಳು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ತುಂಬಾನೇ ಖುಷಿಯಾಗಿದ್ದಾರೆ. ಇಲ್ಲಿನ ಐದು ಆರ್‌ಎಚ್ ಕ್ಯಾಂಪ್‍ಗಳಲ್ಲಿನ ಸುಮಾರು 7 ಸಾವಿರ ಜನ ಅಕ್ರಮ ವಲಸಿಗರು ಈಗ ಹೊಸದಾಗಿ ಪೌರತ್ವ ಪಡೆಯುತ್ತಿದ್ದಾರೆ. ಆದರೆ ಈ ಹಿಂದೆ ಪೌರತ್ವ ಪಡೆದು 1971ರಿಂದ ಇಲ್ಲೇ ವಾಸಿಸುತ್ತಿರುವ ಸುಮಾರು 25 ಸಾವಿರ ಜನರಿಗೆ ಇದುವರೆಗೂ ಜಾತಿ ಪ್ರಮಾಣ ಪತ್ರ ಸಿಕ್ಕಿಲ್ಲ.

ಆದಾಯ ಮತ್ತು ಜಾತಿ ಪ್ರಮಾಣ ಪತ್ರದಲ್ಲಿ ಕೇವಲ ಆದಾಯ ತೋರಿಸಿ ಜಾರಿ ಜಾತಿ ಕಾಲಂ ಅನ್ನು ಖಾಲಿ ಬಿಡಲಾಗುತ್ತಿದೆ. ಜಾತಿ ಪ್ರಮಾಣ ಪತ್ರ ಇಲ್ಲದಿರುವುದಕ್ಕೆ ಸಾಕಷ್ಟು ಸೌಲಭ್ಯ, ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು, ರೈತರು ಜಾತಿ ಪ್ರಮಾಣ ಪತ್ರಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಇಲ್ಲಿ ವಾಸವಿರುವ ಶೇಕಡಾ 60ರಿಂದ 70 ರಷ್ಟು ಜನ ನಮಶೂದ್ರ ಜನಾಂಗಕ್ಕೆ ಸೇರಿದವರಾಗಿದ್ದಾರೆ.

ಓಡಿಸ್ಸಾ, ಮೇಘಾಲಯ, ಪಶ್ಚಿಮ ಬಂಗಾಳ ಸೇರಿ ಎಂಟು ರಾಜ್ಯಗಳಲ್ಲಿ ನಮಶೂದ್ರ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ನಮಗೂ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು ಅಂತ ಹೋರಾಟ ನಡೆಸಿದ್ದಾರೆ. ಇಲ್ಲಿ ವಾಸವಿರುವ ಸುಮಾರು 6 ಸಾವಿರ ಕ್ಷತ್ರಿಯಾ ಜನಾಂಗದವರಿದೆ ಮಾತ್ರ 2ಎ ಪ್ರಮಾಣ ಪತ್ರ ನೀಡಲಾಗಿದೆ.

ಒಂದೆಡೆ ಜಾತಿ ಪ್ರಮಾಣ ಪತ್ರದ ಸಮಸ್ಯೆಯಾದರೆ, ಇನ್ನೊಂದೆಡೆ ಜಮೀನಿನ ಭಾಗದ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತ ಬಾಂಗ್ಲಾ ದೇಶ ವಿಭಜನೆ ಬಳಿಕ ಭಾರತಕ್ಕೆ ಬಂದ ವಲಸಿಗರಿಗೆ ಅಂದಿನ ಸರ್ಕಾರ ಭಾರತ ಪೌರತ್ವವನ್ನು ನೀಡಿ ಸಿಂಧನೂರು ತಾಲೂಕಿನಲ್ಲಿ ಸೌಲಭ್ಯಗಳನ್ನು ಒದಗಿಸಿತು. ತಲಾ 3 ಎಕರೆ ಜಮೀನು, ನಿವೇಶನ ಸಹ ನೀಡಿತ್ತು. ಆದರೆ ಜಮೀನಿನ ನಕ್ಷೆಯಿಲ್ಲದ್ದರಿಂದ ಹೊಲಗಳ ಪೋಡಿಯಾಗುತ್ತಿಲ್ಲ. ತಂದೆಯಿಂದ ಬಂದ ಜಮೀನನ್ನು ಮಕ್ಕಳು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಮೀನಿನ ಮೇಲೆ ಕೃಷಿ ಸಾಲ ಪಡೆಯಲು ಸಹ ಸಾಧ್ಯವಿಲ್ಲದ ಪರಸ್ಥಿತಿಯಿದೆ.

ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಿಂದ ನಿರಾಶ್ರಿತ ಯೋಜನೆ ಬಳಿಕ ಬಂದ ಬಾಂಗ್ಲಾ ವಲಸಿಗರು ಪಾರಾಗಿದ್ದಾರೆ. ಆದರೆ ಈಗಾಗಲೇ ಪೌರತ್ವ ಪಡೆದು ವಾಸಿಸುತ್ತಿರುವ ವಲಸಿಗ ನಮಶೂದ್ರ ಜನಾಂಗದವರು ಜಾತಿ ಪ್ರಮಾಣ ಪತ್ರವಿಲ್ಲದೆ ಪರಿತಪಿಸುತ್ತಿದ್ದಾರೆ. ನಮಗೇ ಎಸ್‍ಸಿ ಪ್ರಮಾಣ ಪತ್ರ ನೀಡಿ ಅಂತ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *