ವಂಚನೆ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿ ದುಬೈನಲ್ಲಿ ಅರೆಸ್ಟ್

Public TV
1 Min Read

ತಿರುವನಂತಪುರಂ: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ದುಬೈ ಪೊಲೀಸರು ಬಂಧಿಸಿದ್ದಾರೆ.

ವಂಚನೆ ಪ್ರಕರಣದ ಸಂಬಂಧ ತುಷಾರ್ ವೆಲ್ಲಪಲ್ಲಿ ಅವರನ್ನು ದುಬೈ ಬಳಿಯ ಅಜ್ಮಾನ್‍ನಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ. ತುಷಾರ್ ವೆಲ್ಲಪಲ್ಲಿ ಅವರು ಭಾರತೀಯ ಧರ್ಮಸೇನಾ (ಬಿಡಿಜೆಎಸ್) ಪಕ್ಷದ ಮುಖ್ಯಸ್ಥರಾಗಿದ್ದಾರೆ. ತುಷಾರ್ ಅವರ ಬಂಧನದ ಸಂಬಂಧ ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಅವರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪತ್ರ ಬರೆದಿದ್ದಾರೆ.

ಬಿಡಿಜೆಎಸ್ ಪಕ್ಷದ ಉಪಾಧ್ಯಕ್ಷ ತುಷಾರ್ ವೆಲ್ಲಪಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಂಧನದಲ್ಲಿರುವ ಅವರ ಯೋಗಕ್ಷೇಮ ಮತ್ತು ಆರೋಗ್ಯದ ಬಗ್ಗೆ ನಾನು ಕಳವಲಳಿ ವ್ಯಕ್ತಪಡಿಸುತ್ತೇನೆ. ಈ ವಿಷಯದಲ್ಲಿ ವಿದೇಶಾಂಗ ಸಚಿವರು ವೈಯಕ್ತಿಕ ಗಮನ ಹರಿಸಬೇಕು. ಕಾನೂನಿನ ಮಿತಿಯಲ್ಲಿ ಎಲ್ಲ ರೀತಿಯ ಸಹಾಯಗಳನ್ನು ತುಷಾರ್ ಅವರಿಗೆ ಲಭ್ಯವಾಗುವಂತೆ ಸಹಕರಿಸಿ ಎಂದು ಸಿಎಂ ಪಿಣರಾಯಿ ವಿಜಯನ್ ಅವರು, ಪತ್ರದ ಮೂಲಕ ಜೈಶಂಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ತುಷಾರ್ ವೆಲ್ಲಪಲ್ಲಿ ಅವರು ದುಬೈನಲ್ಲಿ ಕಳೆದ 10 ವರ್ಷಗಳಿಂದ ಕಂಪೆನಿ ನಡೆಸುತ್ತಿದ್ದಾರೆ. ಆದರೆ ಈಗ ಆ ಕಂಪನಿ ನಷ್ಟವನ್ನು ಎದುರಿಸುತ್ತಿದೆ. ಹೀಗಾಗಿ ಉಪ ಗುತ್ತಿಗೆದಾರರು ನಷ್ಟಕ್ಕೆ ಪರಿಹಾರ ನೀಡುವಂತೆ ಕೇಳಿದ್ದಾರೆ. ಹೀಗಾಗಿ ತುಷಾರ್ ಅವರು ದುಬೈನಲ್ಲಿದ್ದಾಗ ಇತ್ತೀಚೆಗೆ ಪರಿಹಾರವಾಗಿ ನೀಡಿದ್ದ ಸುಮಾರು 15.66 ಕೋಟಿ ರೂ. (8 ಮಿಲಿಯನ್ ದಿರ್ಹಾಮ್ಸ್) ಚೆಕ್ ಬೌನ್ಸ್ ಆಗಿದೆ. ಇದರಿಂದಾಗಿ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು 7,06,367 (ಶೇ.64.67) ಮತ ಗಳಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ತುಷಾರ್ ವೆಲ್ಲಪಲ್ಲಿ ಅವರು 78,816 ಮತ ಪಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *