ಸ್ವಾತಂತ್ರ್ಯೋತ್ಸವದಂದು ರಾಹುಲ್‍ಗೆ ಸರ್ಕಾರದಿಂದ ಅವಮಾನ – ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ

Public TV
1 Min Read

ನವದೆಹಲಿ: ಕೆಂಪುಕೋಟೆಯಲ್ಲಿ (Red Fort)  ನಡೆದ ಸ್ವಾತಂತ್ರ್ಯ ದಿನಾಚರಣೆ (Independence Day) ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ ಎಂದು ಕಾಂಗ್ರೆಸ್ (Congress) ಕಿಡಿಕಾರಿದೆ.

ದಶಕದ ಬಳಿಕ ಇದೇ ಮೊದಲ ಬಾರಿಗೆ ವಿಪಕ್ಷ ನಾಯಕರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿದ್ದರು. ಆದರೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಮೊದಲ ಸಾಲಿನಲ್ಲಿ ನಿಗದಿ ಮಾಡಬೇಕಿತ್ತು. ಆದರೆ ಐದನೇ ಸಾಲಿನಲ್ಲಿ ನಿಗದಿ ಮಾಡಿ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

ಮೊದಲ ಸಾಲಿನಲ್ಲಿ ಒಲಿಂಪಿಕ್ಸ್ ಪದಕ ವಿಜೇತರಾದ ಮನುಭಾಕರ್, ಸರಬ್ಜೋತ್ ಸಿಂಗ್, ಸಚಿವರಾದ ಅಮಿತ್ ಶಾ, ಶಿವರಾಜ್ ಸಿಂಗ್ ಚೌಹಾಣ್, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸೇರಿ ಹಲವರು ಗಣ್ಯರು ಕುಳಿತಿದ್ದರು. ಪ್ರೋಟೋಕಾಲ್ ಪ್ರಕಾರ ಅಧಿಕೃತ ವಿಪಕ್ಷ ನಾಯಕರಿಗೆ ಮೊದಲ ಸಾಲಿನಲ್ಲಿಯೇ ಆಸನ ನಿಗದಿ ಮಾಡಬೇಕಿತ್ತು.

ಈ ವಿಚಾರ ಜೋರಾಗುತ್ತಿದ್ದಂತೆ ರಕ್ಷಣಾ ಸಚಿವಾಲಯದ ಮೂಲಗಳು, ರಾಹುಲ್ ಗಾಂಧಿ ಅವರಿಗೆ ಮೊದಲ ಸ್ಥಾನದಲ್ಲೇ ಸೀಟ್ ನೀಡಲಾಗಿತ್ತು. ಆದರೆ ಅವರು ಒಲಿಂಪಿಕ್ಸ್ ಪದಕ ವಿಜೇತರ ಜೊತೆ ಕೂರುವುದಾಗಿ ಹೇಳಿದ್ದರಿಂದ ಅವರಿಗೆ ಅಲ್ಲಿ ಸೀಟ್ ನಿಗದಿ ಮಾಡಲಾಗಿದೆ ಎಂದು ತಿಳಿಸಿವೆ.

ಸೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ರಾಹುಲ್ ಗಾಂಧಿ ಮತ್ತು ರಕ್ಷಣಾ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.

Share This Article