ಪಂಜಾಬ್‌ನ ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಹುಲ್ ಗಾಂಧಿ ಭೇಟಿ

1 Min Read

ಚಂಡೀಗಢ: ಪಂಜಾಬ್‌ನ (Punjab) ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು (ಸೆ.15) ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭೇಟಿ ನೀಡಿದರು.

ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ನಿರಂತರ ಮಳೆಯಿಂದಾಗಿ ಪಂಜಾಬ್‌ನ ಹಲವು ಪ್ರದೇಶಗಳು ತೀವ್ರ ಹಾನಿಗೊಳಗಾಗಿವೆ. ಅಮೃತಸರಕ್ಕೆ ಆಗಮಿಸಿದ ಅವರು, ಮೊದಲು ಘೋನೆವಾಲ್ ಗ್ರಾಮಕ್ಕೆ ತೆರಳಿ, ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಅಲ್ಲಿನ ಸ್ಥಳೀಯರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.ಇದನ್ನೂ ಓದಿ: ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ಮೋದಿ ಭೇಟಿ – ವೈಮಾನಿಕ ಸಮೀಕ್ಷೆ, ಪರಿಸ್ಥಿತಿ ಅವಲೋಕನ

ಇನ್ನೂ ರಾಹುಲ್ ಗಾಂಧಿ ಅವರು ಅಮೃತಸರದ ರಾಮದಾಸ್‌ನಲ್ಲಿರುವ ಐತಿಹಾಸಿಕ ಗುರುದ್ವಾರ ಬಾಬಾ ಬುದ್ಧ ಸಾಹಿಬ್‌ನಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಗುರುದಾಸ್ಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಇದೇ ವೇಳೆ ಅಮೃತಸರದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ, ಅಮೃತಸರ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಮತ್ತು ಪಕ್ಷದ ಇತರ ನಾಯಕರಿದ್ದರು.

ಇತ್ತೀಚಿಗೆ ಸೆ.9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪೀಡಿತ ಪಂಜಾಬ್‌ಗೆ ಭೇಟಿ ನೀಡಿದ್ದರು. ಈ ವೇಳೆ 1,600 ಕೋಟಿ ರೂ. ಆರ್ಥಿಕ ಸಹಾಯವನ್ನು ಘೋಷಿಸಿದ್ದರು.

ಧಾರಾಕಾರ ಮಳೆಯಿಂದಾಗಿ ಪಂಜಾಬ್ ಭೀಕರ ಪ್ರವಾಹವನ್ನು ಎದುರಿಸಿದ್ದು, ಪಂಜಾಬ್‌ನ 14 ಜಿಲ್ಲೆಗಳಲ್ಲಿ ತೀವ್ರಹಾನಿಯನ್ನುಂಟು ಮಾಡಿದೆ. ಈವರೆಗೂ 45ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಸುಮಾರು 2,000 ಗ್ರಾಮಗಳು ಮುಳುಗಡೆಯಾಗಿವೆ. ಇನ್ನೂ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯದಲ್ಲಿ ನಿರಂತರ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ.ಇದನ್ನೂ ಓದಿ: ಜಿಎಸ್‍ಟಿ ಬಗ್ಗೆ ಅರಿವು ಮೂಡಿಸಲು ಸಮ್ಮೇಳನ ಆಯೋಜಿಸಿ – ಎನ್‍ಡಿಎ ಸಂಸದರಿಗೆ ಮೋದಿ ಸೂಚನೆ

Share This Article