ಬೆಂಗಳೂರು ಕಾಲ್ತುಳಿತಕ್ಕೆ ರಾಹುಲ್ ಗಾಂಧಿ ಅತೃಪ್ತಿ – ಕ್ರೆಡಿಟ್ ಲೆಕ್ಕಾಚಾರದಲ್ಲಿ ಅವಸರದ ತೀರ್ಮಾನ?

Public TV
3 Min Read

– ವಿಧಾನಸೌಧ ಕಾರ್ಯಕ್ರಮ ಆಯೋಜಿಸಿದ್ದೇ ಸರ್ಕಾರ; ರಾಜಭವನ
– 2 ದಿನದಲ್ಲಿ ವರದಿ ಕೊಡಲು ಹೈಕೋರ್ಟ್ ಕಟ್ಟಾಜ್ಞೆ

ನವದೆಹಲಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಭೀಕರ ಕಾಲ್ತುಳಿತ ಪ್ರಕರಣ (Stampede Case), ಸರ್ಕಾರ ನಿರ್ವಹಿಸಿದ ಬಗೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ರಾಹುಲ್ ಭೇಟಿಯಾಗಿರುವ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ವರದಿ ಕೊಟ್ಟಿದ್ದಾರೆ.

ಕ್ರೆಡಿಟ್ ಕ್ಲೈಮ್‌ ಲೆಕ್ಕಾಚಾರದಲ್ಲಿ ಅವಸರದ ತೀರ್ಮಾನವೇ ಘಟನೆಗೆ ಕಾರಣ ಆಗಿದೆ. ನಮ್ಮ ಜವಾಬ್ದಾರಿಯೂ ಇದೆ ಎಂದು ಸಿಎಂ-ಡಿಸಿಎಂ ತಪ್ಪೊಪ್ಪಿಕೊಂಡಿದ್ದಾರೆ ಅನ್ನೋದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಹೈಕಮಾಂಡ್‌ಗೆ ಸಿದ್ದರಾಮಯ್ಯ ರಿಪೋರ್ಟ್‌ ಏನು?
ಆರ್‌ಸಿಬಿಗೆ ಅತಿ ಹೆಚ್ಚು ಫ್ಯಾನ್ (RCB Fans) ಫಾಲೋವರ್ಸ್ ಇದ್ದಾರೆ. 18 ವರ್ಷದ ನಂತರ ಕಪ್ ಗೆದ್ದಿದ್ದರಿಂದ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ್ದ ಸಂಭ್ರಮವಿತ್ತು. ಫ್ರಾಂಚೈಸಿಯೊಂದರ ಗೆಲುವಷ್ಟೇ ಅಂತ ಪರಿಗಣಿಸಿ ಸುಮ್ಮನಾಗುವ ಪರಿಸ್ಥಿತಿ ಇರಲಿಲ್ಲ. ಸರ್ಕಾರ ಸುಮ್ಮನಿದ್ದರೆ ಸರ್ಕಾರಕ್ಕೆ ಅದೇ ನೆಗೆಟಿವ್ ಆಗುವ ಸಾಧ್ಯತೆ ಇತ್ತು. ಯುವ ಸಮುದಾಯದ ಪಾಲಿಗೆ ಸರ್ಕಾರವೂ ನಮ್ಮ ಜೊತೆಗೆ ಕೈಜೋಡಿಸಿತು ಎಂಬ ಖುಷಿ ಇರುತ್ತಿತ್ತು. ಹಾಗಾಗಿ, ಆರ್‌ಸಿಬಿ ಆಟಗಾರರ ಸನ್ಮಾನಕ್ಕೆ ಸರ್ಕಾರ ಮುಂದಾಯಿತು. ಇದು ಸಹಜವಾಗಿಯೇ ಸರ್ಕಾರದ ಇಮೇಜ್ ಹೆಚ್ಚಳಕ್ಕೂ ಸಹಕಾರಿ ಆಗ್ತಿತ್ತು. ಕಾಲ್ತುಳಿತಕ್ಕೆ ಪೊಲೀಸರ ವೈಫಲ್ಯವೇ ಕಾರಣ, ಸರಿಯಾದ ಸಿದ್ಧತೆ ಮಾಡದ ಕಾರಣ ಅಧಿಕಾರಿಗಳ ಅಮಾನತು ಆಗಿದೆ. ಘಟನೆ ಗೊತ್ತಾಗುತ್ತಿದ್ದಂತೆ ನಾನೇ ಆಸ್ಪತ್ರೆಗೆ ಹೋಗಿ ಪರಿಸ್ಥಿತಿ ನಿಭಾಯಿಸಲು ಸೂಚಿಸಿದ್ದೇನೆ. ಮಾಹಿತಿ ಇಲ್ಲದ ಕಾರಣ ಡಿಸಿಎಂ ಕ್ರೀಡಾಂಗಣಕ್ಕೆ ಹೋಗಿದ್ದಾರೆ ಎಂದು ಸಿಎಂ ರಾಹುಲ್‌ ಗಾಂಧಿ ಅವರಿಗೆ ರಿಪೋರ್ಟ್‌ ನೀಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಡಿಕೆಶಿ ವರದಿ ಏನು…?
ಕಾಲ್ತುಳಿತಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ವಿಧಾನಸೌಧ ಮುಂದೆ ಅಹಿತಕರ ಘಟನೆ ನಡೆದಿಲ್ಲ. ನಿರೀಕ್ಷೆಗೂ ಮೀರಿದ ಜನ ಸೇರಿದ್ದಕ್ಕೆ ಸಮಸ್ಯೆ ಆಯ್ತು. ಪೂರ್ವ ಸಿದ್ಧತೆ ಮಾಡದೇ ಇರೋದು ಘಟನೆಗೆ ಕಾರಣ.. ಗೌರವ ಉದ್ದೇಶದಿಂದ ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ್ದು, ಸ್ಟೇಡಿಯಂ ಸಂಭ್ರಮಾಚರಣೆ ವೇಳೆ ಸಾವಾಗಿರುವ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ನಾನು ಸಮಾರಂಭದಲ್ಲಿ ಭಾಗಿಯಾಗಿದ್ದೆ. ದುರಂತ ಗೊತ್ತಾದ ಕೂಡಲೇ ಬೇಗ ಮುಗಿಸಲು ತಿಳಿಸಿದೆ. ಸ್ಟೇಡಿಯಂ ಒಳಗೆ ಸಾವಿರಾರು ಅಭಿಮಾನಿಗಳಿದ್ದರು. ಕಾರ್ಯಕ್ರಮ ಮಾಡದಿದ್ರೆ ಆಕ್ರೋಶ ಜಾಸ್ತಿ ಆಗ್ತಿತ್ತು. ಕೂಡಲೇ ಆಸ್ಪತ್ರೆಗೆ ಹೋಗಿ ಗಾಯಾಳುಗಳನ್ನು ವಿಚಾರಿಸಿದ್ದೇವೆ ಎಂದು ತಿಳಿಸಿರುವುದಾಗಿ ತಿಳಿದುಬಂದಿದೆ.

ಕೊನೆಗೂ ಮೌನ ಮುರಿದ ರಾಜಭವನ
ವಿಧಾನಸೌಧ ಗ್ರ್ಯಾಂಡ್‌ ಸ್ಟೆಪ್ಸ್ ಮೇಲೆ ಆರ್‌ಸಿಬಿ ಆಟಗಾರರ ಸನ್ಮಾನ ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಆಹ್ವಾನಿಸಿದ್ಯಾರು..? ನಮಗೆ ಗೊತ್ತಿಲ್ಲ ಅವರನ್ನೇ ಕೇಳಿ ಅಂತ ಸಿಎಂ, ಡಿಸಿಎಂ ಹೇಳಿದ್ದರು. ಇದೀಗ, ರಾಜಭವನ ಖುದ್ದು ವಿವಾದಕ್ಕೆ ತೆರೆ ಎಳೆದಿದೆ. ಸರ್ಕಾರದ ಆಹ್ವಾನದ ಮೇರೆಗೆ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಿದ್ದರು. ಆರ್‌ಸಿಬಿ ಆಟಗಾರರಿಗೆ ರಾಜಭವನದಲ್ಲೇ ಸನ್ಮಾನಿಸಲು ರಾಜ್ಯಪಾಲರು ಬಯಸಿದ್ದರು. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ರಾಜ್ಯಪಾಲರು ಮಾಹಿತಿ ಕೊಟ್ಟಿದ್ದರು. ಆದ್ರೆ, ಸಿಎಂ ಸಿದ್ದರಾಮಯ್ಯ ಖುದ್ದು ರಾಜ್ಯಪಾಲರಿಗೆ ಕರೆ ಮಾಡಿ.. ವಿಧಾನಸೌಧದ ಬಳಿಯೇ ನಾವು ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದೇವೆ. ನೀವು ಕೂಡ ಇದರಲ್ಲಿ ಭಾಗವಹಿಸಿ ಎಂದು ಆಹ್ವಾನವಿತ್ತಿದ್ದರಂತೆ. ಸಿಎಂ ಕರೆಯೋಲೆ ಮೇಲೆಯೇ ಗವರ್ನರ್ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿ ಆಗಿದ್ರು ಅಂತ ರಾಜಭವನ ಸ್ಪಷ್ಟಪಡಿಸಿದೆ.

ಈ ಮೂಲಕ, ವಿಧಾನಸೌಧ ಕಾರ್ಯಕ್ರಮವನ್ನು ಆಯೋಜಿಸಿದ್ದೇ ಸರ್ಕಾರ ಅಂತ ದೃಢಪಟ್ಟಿದೆ. ಈ ಮಧ್ಯೆ, ಕಾಂಗ್ರೆಸ್ ಶಾಸಕ ಗಣಿಗ ರವಿ ಮಾತಾಡಿ, ಕೆಎಸ್‌ಸಿಎ, ಆರ್‌ಸಿಬಿ ಅವರು ಸಿಎಂ ಬಳಿ ಬಂದು 18 ವರ್ಷ ಬಳಿಕ ಗೆದ್ದಿದ್ದೇವೆ. ವಿಧಾನಸೌಧ ಮುಂದೆ ಸನ್ಮಾನ ಮಾಡಿ ಎಂದು ಕೇಳಿಕೊಂಡರು. ಅದಕ್ಕೆ ಸಿಎಂ ಅವರು ಒಪ್ಪಿಕೊಂಡಿದ್ದಾರೆ. ಭದ್ರತೆಯನ್ನು ಕಾಪಾಡಿಕೊಳ್ಳಬೇಕಾಗಿದ್ದು ಪೊಲೀಸ್ ಇಲಾಖೆಯದ್ದು. ಬಲವಂತವಾಗಿ ಯಾರಿಗೂ ಸನ್ಮಾನ ಮಾಡಿಲ್ಲ ಅಂದಿದ್ದಾರೆ.

2 ದಿನದಲ್ಲಿ ವರದಿ ಕೊಡಲು ಹೈಕೋರ್ಟ್ ಕಟ್ಟಾಜ್ಞೆ
ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ಇವತ್ತು ಕೂಡ ವಿಚಾರಣೆ ನಡೆದಿದೆ. ಈಗಾಗಲೇ ತನಿಖೆ ನಡೆಯುತ್ತಿದ್ದು, ವರದಿ ಸಲ್ಲಿಕೆಗೆ ಎಜಿ ಶಶಿಕಿರಣ್ ಶೆಟ್ಟಿ 1 ತಿಂಗಳ ಕಾಲಾವಕಾಶ ಕೋರಿದ್ರು. ಇದಕ್ಕೆ ಅವಕಾಶ ಕೊಡದ ಹೈಕೋರ್ಟ್, ಜೂನ್ 12ಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಸೂಚನೆ ಕೊಟ್ಟಿದೆ. ಅಲ್ಲದೇ ವಿಕ್ಟರಿ ಪರೇಡ್ ಬಗ್ಗೆ ಯಾರು.. ಯಾವಾಗ.. ನಿರ್ಧಾರ ತೆಗೆದುಕೊಂಡಿದ್ದರು..? ಸಾರ್ವಜನಿಕರು/ಜನಸಂದಣಿ ನಿಯಂತ್ರಣಕ್ಕೆ ಏನು ಕ್ರಮ ಆಗಿತ್ತು..? ಗಾಯಾಗಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಎಷ್ಟು ಸಮಯ ಬೇಕಾಯಿತು..? 50 ಸಾವಿರಕ್ಕಿಂತ ಮೇಲ್ಪಟ್ಟು ಸೇರುವ ಜನಸಂದಣಿಗೆ ಎಸ್‌ಓಪಿ ಮಾಡಲಾಗಿತ್ತಾ..? ಅಂತಲೂ ಪ್ರಶ್ನೆ ಮಾಡಿದ್ದು, ನಾಡಿದ್ದು ವರದಿ ಸಲ್ಲಿಸುವಂತೆ ಸೂಚಿಸಿದೆ.

Share This Article