ಬೆಂಗಳೂರು: ಆಂತರಿಕ ಸಂಘರ್ಷ, ಒಳಬೇಗುದಿ, ಅಧಿಕಾರ ಹಸ್ತಾಂತರ ಲೆಕ್ಕಾಚಾರ ಮಧ್ಯೆ ನವೆಂಬರ್‌ನಲ್ಲಿ ಕರ್ನಾಟಕಕ್ಕೆ (Karnataka) ರಾಹುಲ್ ಗಾಂಧಿ (Rahul Gandhi) ಆಗಮಿಸಲಿದ್ದಾರೆ.
ನವೆಂಬರ್ ಕ್ರಾಂತಿಗೂ ಮುನ್ನ ರಾಜ್ಯ ಕಾಂಗ್ರೆಸ್‌ನಲ್ಲಿ ಜಟಾಪಟಿ ಆರಂಭವಾಗುವ ಸುಳಿವು ಸಿಕ್ಕಿದೆ. ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿ ಎಂದು ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಯತೀಂದ್ರ ಹೇಳಿಕೆಯಿಂದ ಬಿಜೆಪಿಗೆ ದೊಡ್ಡ ಅಸ್ತ್ರ ಸಿಕ್ಕಿದ್ದರೆ ಮತ್ತೊಂದು ಕಡೆ ಸಚಿವ ಸಂಪುಟ ಪುನಾರಚನೆಯ ಪ್ಲ್ಯಾನ್‌ನಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಇನ್ನೊಂದು ಕಡೆ ಸಿಎಂ ಗದ್ದುಗೆ ಏರುವ ಸಂಕಲ್ಪ ಮಾಡಿಕೊಂಡು ಡಿಸಿಎಂ ಡಿ.ಕೆ ಶಿವಕುಮಾರ್ ದೇವರ ದರ್ಶನ ಪಡೆಯುತ್ತಿದ್ದಾರೆ. ಈ ಅಧಿಕಾರ ಹಸ್ತಾಂತರ ಲೆಕ್ಕಾಚಾರದ ಚರ್ಚೆಯ ಮಧ್ಯೆ ನ.19ರಂದು ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ.
ಡಿಕೆ ಈಗ ಆಕ್ಟಿವ್:
ಎರಡೂವರೆ ವರ್ಷ ಕಳೆಯುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಆಕ್ಟಿವ್ ಆಗಿದ್ದಾರೆ. ಈಗಾಗಲೇ ʼA Symoble Of Loyaltyʼ ಹೆಸರಿನಲ್ಲಿ ಡಿಕೆ ಶಿವಕುಮಾರ್ ಹೆಸರಿನಲ್ಲಿ ಪುಸ್ತಕ ಬಿಡುಗಡೆಯಾಗಿದೆ.
ಬಿಹಾರ ಚುನಾವಣೆಯವರೆಗೆ (Bihar Election) ಕಾಯಿರಿ. ನಂತರ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸೋಣ ಎಂದು ಹೈಕಮಾಂಡ್ ಹೇಳಿದ ಬೆನ್ನಲ್ಲೇ ಅಧಿಕಾರ ಹಸ್ತಾಂತರವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಒಂದು ಮತ ಕಳವಿಗೆ 80 ರೂ. ʻಕೂಲಿʼ – ಬಿಜೆಪಿ ಮೇಲೆ ಆರೋಪ ಹೊರಿಸಿದ ಈಶ್ವರ್ ಖಂಡ್ರೆ
ಇತ್ತ ಅಧಿಕಾರ ಬಿಟ್ಟುಕೊಡದೇ ಸಚಿವ ಸಂಪುಟ ಪುನಾರಚನೆಗೆ ಸಿಎಂ (CM Siddaramaiah) ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತದೆ. ಒಂದು ವೇಳೆ ಅಧಿಕಾರ ಬಿಟ್ಟುಕೊಟ್ಟರೂ ತನ್ನದೇ ಬಣದವರಿಗೆ ಮಣೆ ಹಾಕಲು ಮುಂದಾಗಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಯತೀಂದ್ರ ಸಿದ್ದರಾಮಯ್ಯ ಈ ಹಿಂದೆ ಸಿದ್ದರಾಮಯ್ಯನವರು 5 ವರ್ಷ ಕಾಲ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಮಾತನಾಡುತ್ತಾ ತಂದೆಯವರು ರಾಜಕೀಯ ಅಂತ್ಯಕಾಲದಲ್ಲಿದ್ದಾರೆ. ದಲಿತರ ಪರ ಒಲವು ಇರುವ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂದು ಹೇಳಿ ಸಂಚಲನ ಮೂಡಿಸಿದ್ದಾರೆ.
ಡಿಕೆಶಿ ಅಭಿಮಾನಿಗಳು ಮತ್ತು ಶಾಸಕರು ಈ ಅವಧಿಯಲ್ಲೇ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿ ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕೆ ನೋಟಿಸ್ ಸಹ ನೀಡಲಾಗಿತ್ತು. ಹೀಗಾಗಿ ನವೆಂಬರ್‌ನಲ್ಲಿ ಅಧಿಕಾರ ಹಸ್ತಾಂತರ ಆಗುತ್ತಾ ಇಲ್ವೋ ಎನ್ನುವ ಪ್ರಶ್ನೆಗೆ ಕೆಲ ದಿನಗಳಲ್ಲಿ ಉತ್ತರ ಸಿಗಲಿದೆ.
