ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿ ವಿವಾದ ಮೈಮೇಲೆ ಎಳೆದುಕೊಂಡ ರಾಹುಲ್ ಗಾಂಧಿ

Public TV
3 Min Read

– ರಾಗಾಗೆ ನಿಯಮ ಅನ್ವಯಿಸಲ್ವಾ ಎಂದು ಪ್ರಶ್ನೆ

ನವದೆಹಲಿ: ಕಾಂಗ್ರೆಸ್‌ ಸಂಸದ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ನಿಷೇಧಿತ ಚೀನಿ ಡ್ರೋನ್‌ ಹಾರಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಚೀನಾ ನಮ್ಮ ಶತ್ರುವಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಚೀನಿ ಡ್ರೋನ್‌ (DJI Chinese drone) ವಿವಾದ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ.

ಇದೇ ಫೆ.15ರಂದು ರಾಹುಲ್‌ ಗಾಂಧಿ ಡಿಜೆಐ ಡ್ರೋನ್‌ ಹಾರಿಸಿದ್ದರು. ಈ ವಿಡಿಯೋವನ್ನ ತಮ್ಮ ಎಕ್ಸ್‌ ಖಾತೆಯಲ್ಲೂ ಹಂಚಿಕೊಂಡಿದ್ದರು. ಅಲ್ಲದೇ ನಮ್ಮ ಪ್ರತಿಸ್ಪರ್ಧಿಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಡ್ರೋನ್‌ಗಳನ್ನು ಹೆಚ್ಚಾಗಿ ಬಳಸುತ್ತಿರುವುದನ್ನು ನಾವು ಕಾಣಬಹುದು. ಆದ್ರೆ ದುರದೃಷ್ಟವಶಾತ್‌ ಪ್ರಧಾನಿ ಮೋದಿ (Narendra Modi) ಸರ್ಕಾರ, ಇಂತಹ ಡ್ರೋನ್‌ ಬಳಕೆಯ ಲಾಭ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಪ್ರಧಾನಿ ಮೋದಿ ಇನ್ನೂ ಟೆಲಿಪ್ರಾಮ್ಟರ್‌ ಭಾಷಣ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಕುಟುಕಿದ್ದಾರೆ.

ಡ್ರೋನ್ ಉದ್ಯಮವು ಒದಗಿಸಿದ ಅವಕಾಶವನ್ನು ಪ್ರಧಾನಿ ಮೋದಿ ಗ್ರಹಿಸಲು ವಿಫಲರಾಗಿದ್ದಾರೆ. ಭಾರತಕ್ಕೆ ಬಲವಾದ ಉತ್ಪಾದನಾ ವ್ಯವಸ್ಥೆ ಬೇಕೇ ಹೊರತು ಖಾಲಿ ಪದಗಳಲ್ಲ ಎಂದು ಸಹ ವಿಡಿಯೋದಲ್ಲಿ ಹೇಳಿದ್ದರು. ಅದ್ರೆ ರಾಗಾ ಅವರು ವೀಡಿಯೋನಲ್ಲಿ ತೋರಿಸಿದ್ದ ಚೀನಿ ಡ್ರೋನ್‌ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ದೆಹಲಿ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ, ಬಿಕ್ಕಟ್ಟು ನಿರ್ವಹಣೆಗಾಗಿ ಎಐ ತಂತ್ರಜ್ಞಾನ ಬಳಕೆ

ಮೋದಿ ಸರ್ಕಾರವನ್ನು ಟೀಕಿಸುವ ಸಲುವಾಗಿ ರಾಹುಲ್ ಗಾಂಧಿ ನಿಷೇಧಿತ ಚೀನೀ ಡ್ರೋನ್ ಪ್ರದರ್ಶಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿಷೇಧಿತ ಚೀನೀ DJI ಡ್ರೋನ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸಿರುವ ರಾಹುಲ್ ಗಾಂಧಿ ಭಾರತದ ಡ್ರೋನ್ ಉದ್ಯಮವನ್ನು ಅವಮಾನಿಸಿದ್ದಾರೆ ಎಂದು ಡ್ರೋನ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಸ್ಮಿತ್ ಶಾ ಟೀಕಿಸಿದ್ದಾರೆ. ಭಾರತದಲ್ಲಿ ನಿಷೇಧಿಸಲಾಗಿರುವ ಚೀನಾದ ಈ ಡ್ರೋನ್ ಅನ್ನು ರಾಹುಲ್ ಗಾಂಧಿ ಹೇಗೆ ತರಿಸಿಕೊಂಡರು? ಕಳ್ಳಸಾಗಣೆ ಮೂಲಕ ತರಲಾಯಿತೆ? ಕಾನೂನಿನ ಪ್ರಕಾರ ಅದು ರಿಜಿಸ್ಟರ್ ಆಗಿದೆಯೇ? ರಾಹುಲ್‌ ಗಾಂಧಿಗೆ ನಿಯಮಗಳು ಅನ್ವಯಿಸುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಬ್ಯಾಟರಿಗಳು, ಪ್ರೊಪೆಲ್ಲರ್‌ಗಳು, ಫ್ಲೈಟ್ ಕಂಟ್ರೋಲರ್‌ಗಳು ಮತ್ತು ಮೋಟಾರ್‌ಗಳು ಸೇರಿದಂತೆ ಡ್ರೋನ್ ಘಟಕ ತಯಾರಿಸುವ 50ಕ್ಕೂ ಹೆಚ್ಚು ಕಂಪನಿಗಳು ದೇಶದಲ್ಲಿವೆ. ಹೀಗಿರುವಾಗ ಡ್ರೋನ್‌ ಬಗ್ಗೆ ತಿಳಿವಳಿಕೆ ಇಲ್ಲದವರು ಟೀಕೆ ಮಾಡುವುದು ತಪ್ಪು ಎಂದು ಸ್ಮಿತ್ ಶಾ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಐರಿಷ್-ಬ್ರಿಟಿಷ್ ಪ್ರವಾಸಿ ಯುವತಿಯ ರೇಪ್ & ಮರ್ಡರ್ ಕೇಸ್ – ಗೋವಾ ನಿವಾಸಿಗೆ ಜೀವಾವಧಿ ಶಿಕ್ಷೆ

Share This Article