ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿಗೆ ಬಂದಾಗ ನಿಜವಾಗಿಯೂ ಆಗಿದ್ದೇನು?

Public TV
3 Min Read

ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆಯ ಪ್ರಚಾರಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಬ್ಬಳ್ಳಿಯ ಬಾನಂಗಳದಲ್ಲೇ ಕೆಲಕಾಲ ಆತಂಕದ ಪರಿಸ್ಥಿತಿ ಎದುರಿಸಬೇಕಾಯಿತು. ತಾಂತ್ರಿಕ ದೋಷದಿಂದ ಆಗಿದೆ ಎನ್ನಲಾದ ಘಟನೆ ಬಗ್ಗೆ ರಾಹುಲ್ ಗಾಂಧಿ ಜೊತೆಗಿದ್ದ ಕೌಶಲ್ ವಿದ್ಯಾರ್ಥಿ ಎಂಬವರು ರಾಜ್ಯ ಡಿಜಿಪಿ ನೀಲಮಣಿ ರಾಜು ಅವರಿಗೆ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಇಂದು ಬೆಳಗ್ಗೆ ಏನಾಯ್ತು?: ಕರಾವಳಿ ಕರ್ನಾಟಕಕ್ಕೆ ಪ್ರಚಾರಕ್ಕೆ ಆಗಮಿಸುತ್ತಿದ್ದ ರಾಹುಲ್ ಗಾಂಧಿ ಅವರು ವಿಶೇಷ ವಿಮಾನದಲ್ಲಿ ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದರು. ಆದರೆ ವಿಮಾನದ ಲ್ಯಾಂಡಿಂಗ್ ವೇಳೆ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಕೌಶಲ್ ದೂರಿನಲ್ಲಿ ಹೇಳಿದ್ದಾರೆ.

ನಾನು ರಾಹುಲ್ ಗಾಂಧಿ ಸೇರಿ ನಾಲ್ವರ ಜೊತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ನಮ್ಮ ಜೊತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದ್ದರು. ಅಲ್ಲದೆ ರಾಮ್ ಪ್ರೀತ್, ರಾಹುಲ್ ರವಿ ಹಾಗೂ ಎಸ್‍ಪಿಜಿ ಅಧಿಕಾರಿಯಾಗಿದ್ದ ರಾಹುಲ್ ಗೌತಮ್ ಜೊತೆಗಿದ್ದರು. ದೆಹಲಿಯಿಂದ ಸುಮಾರು 9.20ಕ್ಕೆ ಹೊರಟ ವಿಮಾನ 11.45ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು.

ಆದರೆ ಈ ಪ್ರಯಾಣದ ವೇಳೆ ನಮಗೆ ಹಲವು ತಾಂತ್ರಿಕ ತೊಂದರೆಗಳು ಎದುರಾದವು. ಸುಮಾರು 10.45ರ ವೇಳೆಗೆ ವಿಮಾನ ದಿಢೀರನೇ ಎಡಭಾಗಕ್ಕೆ ವಾಲಿತು. ವೇಗವಾಗಿ ಆಗಸದಿಂದ ಕೆಳಗಿಳಿಯುತ್ತಿರುವಂತೆ ಭಾಸವಾಯಿತು. ಹೊರಗೆ ಬಿಸಿಲು ಹಾಗೂ ಸಾಮಾನ್ಯ ವಾತಾವರಣವಿತ್ತು. ಯಾವುದೇ ರೀತಿಯ ವೇಗದ ಗಾಳಿಯೂ ಬೀಸುತ್ತಿರಲಿಲ್ಲ.

ವಿಮಾನದ ಒಂದು ಭಾಗದಿಂದ ಸದ್ದು ಕೇಳುತ್ತಿತ್ತು. ಅಲ್ಲದೆ ನಾವು ಹೋಗಿ ಚೆಕ್ ಮಾಡಿದಾಗ ವಿಮಾನದ ಅಟೋ ಪೈಲಟ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರಲಿಲ್ಲ. ಮೂರು ಬಾರಿ ವಿಮಾನವನ್ನು ಲ್ಯಾಂಡ್ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಮೂರನೇ ಯತ್ನದಲ್ಲಿ ವಿಮಾನ ಲ್ಯಾಂಡ್ ಆಯಿತು. ನಾವು ಪ್ರಯಾಣಿಸುತ್ತಿದ್ದ ವಿಮಾನ ಬೆಳಗ್ಗೆ 11.25ರ ವೇಳೆಗೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಯಿತು. ಈ ವೇಳೆ ವಿಮಾನ ಅಲುಗಾಡುತ್ತಿತ್ತು, ಜೊತೆಗೆ ನಮಗೆ ವಿಮಾನದಿಂದ ವಿಚಿತ್ರ ಶಬ್ದ ಕೇಳಿಸುತ್ತಿತ್ತು.

ವಿಮಾನದಲ್ಲಿದ್ದ ಪೈಲಟ್ ಸೇರಿದಂತೆ ಎಲ್ಲರಿಗೂ ಜೀವಭಯವಾಗಿತ್ತು. ಎಲ್ಲರ ಮುಖದಲ್ಲೂ ಆತಂಕ ಕಾಣಿಸುತ್ತಿತ್ತು. ಅಲ್ಲದೆ ವಿಮಾನದ ಸಿಬ್ಬಂದಿಯೂ ವಿಮಾನದ ವಿಚಿತ್ರ ಅನುಭವವನ್ನು ಖಚಿತಪಡಿಸಿದರು. ವಿಮಾನದಲ್ಲಿ ನಮಗಾದ ಅನುಭವ ಸಾಮಾನ್ಯವಾದುದಾಗಿರಲಿಲ್ಲ. ಹವಾಮಾನಕ್ಕೆ ಸಂಬಂಧಿಸಿದ್ದೂ ಆಗಿರಲಿಲ್ಲ. ವಿಮಾನದ ತಾಂತ್ರಿಕ ದೋಷದಿಂದಾಗಿಯೇ ಇಷ್ಟೆಲ್ಲಾ ಘಟನೆಗಳು ನಡೆಯಿತು. ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಈ ಸ್ಥಿತಿಗೆ ತಂದಿದ್ರಾ ಎಂಬುದನ್ನೂ ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಸಮರ್ಪಕ ತನಿಖೆಯಾಗಬೇಕು.

ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ವಿಮಾನದ ಸೂಕ್ತ ತಪಾಸಣೆ ನಡೆಸಬೇಕು. ವಿಮಾನದ ನಿರ್ವಹಣೆಯನ್ನು ಮಾಡುತ್ತಿದ್ದ ವ್ಯಕ್ತಿಗಳನ್ನು ಕೂಡಾ ವಿಚಾರಣೆಗೊಳಪಡಿಸಬೇಕು. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಬೇಕು. ಈ ವಿಮಾನವನ್ನು ತನಿಖೆ ಮುಗಿಯುವವರೆಗೆ ಹುಬ್ಬಳ್ಳಿಯಲ್ಲೇ ಇಟ್ಟುಕೊಳ್ಳಬೇಕು. ತನಿಖೆ ಮುಗಿಯುವವರೆಗೆ ಈ ವಿಮಾನದ ಹಾರಾಟಕ್ಕೆ ಯಾವುದೇ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಪೊಲೀಸರಿಗೆ ನೀಡಿದ ದೂರಿನ ಪ್ರತಿಯನ್ನು ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಘಟನೆ ಬಗ್ಗೆ ಟ್ವೀಟ್ ಮಾಡಿರುವ ನಟಿ ಹಾಗೂ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥೆ ರಮ್ಯಾ, ಆಟೋ ಪೈಲಟ್ ಮಾತ್ರವಲ್ಲ, ವಿಮಾನದ ರಾಡಾರ್ ಸಂಪರ್ಕದಲ್ಲೂ ತೊಂದರೆಯಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಘಟನೆ ವೇಳೆ ವಿಮಾನದಲ್ಲಿದ್ದ ಕೌಶಲ್ ಕೆ ವಿದ್ಯಾರ್ಥಿ ರಾತ್ರಿ 10.09ಕ್ಕೆ ಟ್ವೀಟ್ ಮಾಡಿದ್ದಾರೆ. ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ನಾನು ಜೀವಂತವಾಗಿರುವುದಕ್ಕೆ ಧನ್ಯವಾದ. ನನ್ನ ಜೀವನದಲ್ಲಿ ಇಂತಹ ಭಯಾನಕ ಸ್ಥಿತಿ ಎದುರಿಸಿರಲಿಲ್ಲ. ವಿಮಾನ ಬೀಳುತ್ತೆ ಎಂಬಂತೆ ಭಾಸವಾಗುತ್ತಿತ್ತು. ಆದರೆ ನಮ್ಮ ಅಧ್ಯಕ್ಷರು ಶಾಂತಚಿತ್ತರಾಗಿ ಪೈಲಟ್‍ಗಳ ಜೊತೆ ಮಾತನಾಡಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಬಗ್ಗೆ ಗಮನಹರಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿಶೇಷ ವಿಮಾನದ ಇಬ್ಬರು ಪೈಲಟ್‍ಗಳ ವಿರುದ್ಧ ಕರ್ತವ್ಯ ಲೋಪ ಆರೋಪದಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕಿರ್ ಸನದಿ ನೀಡಿದ ದೂರಿನ ಅನ್ವಯ ಏರ್ ಕ್ರಾಫ್ಟ್ ಕಾಯ್ದೆ 287, 336, ಐಪಿಸಿ ಸೆಕ್ಷನ್ 11 ಅನ್ವಯ ಹುಬ್ಬಳ್ಳಿಯ ಗೋಕುಲ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಮೋದಿ ದೂರವಾಣಿ ಕರೆ: ಸದ್ಯ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ರಾಹುಲ್ ಗಾಂಧಿ ಅವರ ವಿಮಾನ ಸಂಪರ್ಕ ಕಳೆದುಕೊಂಡ ಮಾಹಿತಿ ತಿಳಿದು ಚೀನಾದಿಂದ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. ಅಲ್ಲದೆ ಪ್ರಧಾನಮಂತ್ರಿ ಕಾರ್ಯಾಲಯವೂ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *