ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ

Public TV
2 Min Read

-ಯಾರಾಗ್ತಾರೆ ಕಾಂಗ್ರೆಸ್ ಹೊಸ ಸಾರಥಿ?

ನವದೆಹಲಿ: 2019ರ ಲೋಕಸಭಾ ಚುನಾವಣೆ ಸೋಲಿನ ನೈತಿಕತೆ ಹೊತ್ತು ರಾಹುಲ್ ಗಾಂಧಿ ತಮ್ಮ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ಕಾಂಗ್ರೆಸ್ ಗೆ ನೂತನ ಸಾರಥಿ ನೇಮಕವಾಗಲಿದ್ದಾರೆ ಎಂದು ವರದಿಯಾಗಿದೆ. ಇತ್ತ ರಾಹುಲ್ ಗಾಂಧಿ ತಮ್ಮ ಟ್ವಟ್ಟರ್ ಖಾತೆಯಲ್ಲಿ ಕೇವಲ ಕಾಂಗ್ರೆಸ್ ಸದಸ್ಯ, ಸಂಸದ ಎಂಬುದನ್ನು ಉಳಿಸಿಕೊಂಡು ಪಕ್ಷದ ಅಧ್ಯಕ್ಷ ಪದಗಳನ್ನು ತೆಗೆದು ಹಾಕಿದ್ದಾರೆ.

ಇಷ್ಟು ದಿನ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಕ್ಕೆ ನಾನು ಪಕ್ಷಕ್ಕೆ ಆಭಾರಿಯಾಗಿದ್ದೇನೆ. ಈ ಸುಂದರ ದೇಶಕ್ಕಾಗಿ ಕಾಂಗ್ರೆಸ್ ದುಡಿಯುತ್ತಾ ಬಂದಿದೆ. ದೇಶಕ್ಕಾಗಿ ಕೆಲಸ ಮಾಡಲು ನನಗೆ ವೇದಿಕೆ ನಿರ್ಮಿಸಿಕೊಟ್ಟ ಕಾಂಗ್ರೆಸ್ ಪ್ರೀತಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

ಪಕ್ಷದ ಬಹುತೇಕ ನಾಯಕರು ನಾನೇ ಅಧ್ಯಕ್ಷನಾಗಿ ಮುಂದುವರಿಯಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಪಕ್ಷಕ್ಕೆ ಹೊಸ ಅಧ್ಯಕ್ಷರ ಆಯ್ಕೆ ಅಗತ್ಯವಿದೆ. ನನ್ನ ನೇತೃತ್ವದಲ್ಲಿ ಎದುರಿಸಿದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರಿಂದ ಹೊಸ ಸಾರಥಿಯ ನೇಮಕ ಅವಶ್ಯಕ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಶೀಘ್ರದಲ್ಲಿ ಅಧ್ಯಕ್ಷರ ಚುನಾವಣೆ ನಡೆಯಲಿ. ಅಧ್ಯಕ್ಷರ ಆಯ್ಕೆಯಲ್ಲಿ ನಾನು ಭಾಗಿಯಾಗಲಾರೆ. ಈ ಸಂಬಂಧ ಪಕ್ಷದ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ನಂಬಿಕೆ ಎಂದಿದ್ದಾರೆ.

ಬಿಜೆಪಿ ಬಗ್ಗೆ ದ್ವೇಷವಿಲ್ಲ:
ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹೋರಾಟ ಪ್ರಬಲವಾಗಿತ್ತು. ಆದರೆ ವೈಯಕ್ತಿಕವಾಗಿ ಬಿಜೆಪಿ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಆದ್ರೆ ನನ್ನ ದೇಹದ ಪ್ರತಿ ಕಣವು ಬಿಜೆಪಿಯ ವಿಚಾರ, ಸಿದ್ಧಾಂತಗಳನ್ನು ವಿರೋಧಿಸುತ್ತದೆ. ಇದು ಇಂದು ನಿನ್ನೆಯ ಸಮರವಲ್ಲ, ಬಹು ವರ್ಷಗಳಿಂದ ನಡೆದುಕೊಂಡು ಬಂದಿದೆ. ಬಿಜೆಪಿ ಭಿನ್ನತೆ ನೋಡಿದ್ರೆ ಕಾಂಗ್ರೆಸ್ ಸಮಾನತೆ ನೋಡುತ್ತೆ. ಅವರು ದ್ವೇಷ ಸಾಧಿಸಿದ್ರೆ, ನಾವು ಪ್ರೀತಿಯನ್ನು ನೀಡುತ್ತೇವೆ. ಅವರು ಜನರಲ್ಲಿ ಭಯವನ್ನು ಹುಟ್ಟಿಸಿದರೆ, ಕಾಂಗ್ರೆಸ್ ಅಪ್ಪಿಕೊಂಡು ಸಾಂತ್ವನ ಹೇಳುತ್ತೆ ಎಂದು ಹೇಳುವ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಯಾವುದೇ ರೀತಿಯಲ್ಲಿ ನನ್ನ ಹೋರಾಟದಿಂದ ಹಿಂದೆ ಸರಿಯುತ್ತಿಲ್ಲ. ನಾನೋರ್ವ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಭಾರತಕ್ಕಾಗಿ ನನ್ನ ಜೀವನವನ್ನು ಸಮರ್ಪಿಸಿದ್ದೇನೆ. ನನ್ನ ಕೊನೆ ಉಸಿರು ಇರೋವರೆಗೂ ದೇಶ ಸೇವೆ ಮತ್ತು ರಕ್ಷಣೆಗಾಗಿ ಕೆಲಸ ಮಾಡಲಿದ್ದೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *