ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ಒಳಗೆ ನಡೆಯುತ್ತಿರೋ ಮುಂದಿನ ಸಿಎಂ ಚರ್ಚೆಗೆ ರಾಹುಲ್ ಗಾಂಧಿ (Rahul Gandhi) ತೆರೆ ಎಳೆದಿದ್ದಾರೆ. ಚುನಾವಣೆ ಗೆದ್ದ ಬಳಿಕವೇ ಮುಂದಿನ ಸಿಎಂ (Chief Minister) ಆಯ್ಕೆ ಬಗ್ಗೆ ನಿರ್ಧಾರ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ, ಸಂಘರ್ಷ ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಎಂದು ರಾಜ್ಯನಾಯಕರಿಗೆ ರಾಹುಲ್ ಗಾಂಧಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ತುರುವೇಕೆರೆ ತಾಲ್ಲೂಕಿನ ಅರಕರೆಪಾಳ್ಯದಲ್ಲಿ ಮಾಧ್ಯಮದವರೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಅವರು, ಸಿದ್ದರಾಮಯ್ಯ (Siddaramaiah), ಡಿಕೆಶಿ (DK Shivakumar), ಜಿ.ಪರಮೇಶ್ವರ್ ಸಮ್ಮುಖದಲ್ಲೇ ರಾಹುಲ್ ಗಾಂಧಿ ಖಡಕ್ ಸಂದೇಶ ರವಾನಿಸಿದ್ದಾರೆ. ಮುಂದಿನ ಸಿಎಂ ಜಟಾಪಟಿಗೆ ರಾಹುಲ್ ತೆರೆ ಎಳೆಯುವ ಕಸರತ್ತು ನಡೆಸಿದ್ದಾರೆ. ಮುಂದಿನ ಸಿಎಂ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಈಗ ನಡೀತಿರೋ ಮುಂದಿನ ಸಿಎಂ ವಿಚಾರ ಪಕ್ಷದ ವ್ಯವಸ್ಥೆಯನ್ನು ಹಾಳು ಮಾಡುವ ಸಾಧ್ಯತೆ ಇದೆ. ಮುಂದಿನ ಚುನಾವಣೆಯಲ್ಲಿ (Election) ಕಾಂಗ್ರೆಸ್ ಪಕ್ಷ ಗೆಲ್ಲಲಿದ್ದು, ಗೆದ್ದ ಬಳಿಕವೇ ಮುಂದಿನ ಸಿಎಂ ಯಾರು ಅಂತ ನಿರ್ಧಾರವಾಗಲಿದೆ ಎಂದಿದ್ದಾರೆ. ಗೆದ್ದ ಬಳಿಕ ಮುಂದಿನ ಸಿಎಂ ಆಯ್ಕೆ ಬಗ್ಗೆ ಪಕ್ಷದ ಪದ್ಧತಿಯಂತೆ ಚರ್ಚಿಸಿ ನಿರ್ಧರಿಸಲಾಗುವುದು ಅಂತ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ.
ಅಷ್ಟೇ ಅಲ್ಲ ಪಕ್ಷದಲ್ಲಿ ನಡೆಯುತ್ತಿರುವ ನಾನಾ ನೀನಾ ಸಂಘರ್ಷಕ್ಕೂ ತೆರೆ ಎಳೆಯಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಸಂಘರ್ಷ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಿ. ಒಗ್ಗಟ್ಟು ಕಾಯ್ದುಕೊಂಡು, ಭಿನ್ನಾಭಿಪ್ರಾಯ ಮರೆತು ಎಲ್ಲರೂ ಚುನಾವಣೆಗೆ ಕೆಲಸ ಮಾಡಲೇಬೇಕಾಗುತ್ತದೆ ಎಂದು ರಾಹುಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರೇ ಗೊಂದಲದಲ್ಲಿದೆ, ಹಾಗಾಗಿ ಟ್ರೈನ್‌ನ ಹೆಸರು ಬದಲಿಸಿದ್ದೇವೆ: ನಳೀನ್ ಕುಮಾರ್ ಕಟೀಲ್
ಇನ್ನು ಯಾರೇ ಎಐಸಿಸಿ ಅಧ್ಯಕ್ಷರಾದರೂ ಗಾಂಧಿ ಕುಟುಂಬದಲ್ಲಿ ರಿಮೋಟ್ ಕಂಟ್ರೋಲ್ ಇರುತ್ತೆ ಎಂಬ ಆರೋಪವನ್ನು ತಳ್ಳಿಹಾಕಿದ ರಾಹುಲ್, ಎಐಸಿಸಿ ಚುನಾವಣೆ ಬಗ್ಗೆ ನಾನು ಯಾವುದೇ ಹೇಳಿಕೆ ಕೊಡಲ್ಲ. ನಾಮಪತ್ರ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಯವರು ಮತ್ತು ಶಶಿ ತರೂರ್ ಅವರು ಇಬ್ಬರಿಗೂ ಪಕ್ಷದಲ್ಲಿ ಉನ್ನತ ಹುದ್ದೆಗಳಿವೆ, ಗೌರವ ಇದೆ. ಇವರಿಬ್ಬರಲ್ಲಿ ಯಾರೇ ಗೆದ್ದರೂ ಅವರು ನಮ್ಮ ರಿಮೋಟ್ ಕಂಟ್ರೋಲ್ ಆಗಿರ್ತಾರೆ ಅಂತ ನನಗೆ ಅನಿಸಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಮ್ಯಾಜಿಕ್ ನಂಬರ್ ಬರದಿದ್ರೆ ಜೆಡಿಎಸ್ (JDS) ಜತೆ ಮೈತ್ರಿನಾ ಎಂದು ಕೇಳಿದ ಪ್ರಶ್ನೆಗೆ, ಇದರ ಬಗ್ಗೆ ಸಿದ್ದರಾಮಯ್ಯ, ಡಿಕೆಶಿಯೇ ಉತ್ತರ ಕೊಡ್ತಾರೆ. ಚುನಾವಣೆಯಲ್ಲಿ ನಾವೇ ಗೆಲ್ತೇವೆ ಅಂತ ಜಾರಿಕೊಂಡ್ರು. ಕೈ ನಾಯಕರು ಬೇಲ್ ಮೇಲಿದ್ದಾರೆ ಎಂಬ ಬಿಜೆಪಿ (BJP) ಆರೋಪಕ್ಕೆ, ವಿರೋಧ ಪಕ್ಷಗಳ ಮೇಲೆ ದಾಳಿ ಮಾಡಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ತಿದೆ. ಇದರಿಂದಲೇ ಸರ್ಕಾರಗಳನ್ನು ಬೀಳಿಸುವ ರಾಜಕಾರಣ ಮಾಡ್ತಿದೆ. ಇದೇ ಎಲ್ಲ ಸಮಸ್ಯೆಗಳಿಗೂ ಕಾರಣ ಅಂತ ತಿರುಗೇಟು ನೀಡಿದರು. ಇದನ್ನೂ ಓದಿ: `ಕೆಲವೇ ಕ್ಷಣಗಳಲ್ಲಿ ವಿಧಾನಸೌಧ ಬ್ಲಾಸ್ಟ್’ – ಬೆದರಿಕೆ ಕರೆ ಮಾಡಿದ್ದ ಟೆಕ್ಕಿ ಅರೆಸ್ಟ್
ಭಾರತ್ ಜೋಡೋ ಯಾತ್ರೆ ಇಂದು ತುಮಕೂರು ಪ್ರವೇಶಿಸಿದ್ದು, 7ನೇ ದಿನ ಮುಗಿಸಿದೆ. ರಾಹುಲ್ ಗೆ ಪರಮೇಶ್ವರ್, ಕೆ.ಎನ್ ರಾಜಣ್ಣ ಸೇರಿ ಹಲವು ತುಮಕೂರು ಕೈ ನಾಯಕರು ಸಾಥ್ ಕೊಟ್ಟಿದ್ರು. ಮಧ್ಯಾಹ್ನದ ಹೊತ್ತಿಗೆ ಡಿಕೆಶಿ ಬಂದು ಸೇರಿಕೊಂಡರು. ತುರುವೇಕೆರೆಯಲ್ಲಿ ಪಾದಯಾತ್ರೆಗೆ ಭಾರೀ ಜನಸ್ತೋಮ ಜಮಾಯಿಸಿತ್ತು. ಒಟ್ಟಿನಲ್ಲಿ ರಾಹುಲ್ ಗಾಂಧಿ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯನ್ನಷ್ಟೇ ನಡೆಸ್ತಿಲ್ಲ. ಯಾತ್ರೆಯ ಜತೆಗೆ ರಾಜ್ಯ ಕಾಂಗ್ರೆಸ್ ನಾಯಕರನ್ನು ಜೋಡಿಸುವ ಕೆಲಸವನ್ನು ಸಹ ಮಾಡ್ತಿದ್ದಾರೆ.