ಭಾಷಣದ ನಡುವೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ!- ವೀಡಿಯೋ ವೈರಲ್‌

Public TV
2 Min Read

ಲಕ್ನೋ: ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ತಾಪಮಾನದಲ್ಲಿ ಭಾರೀ ಏರಿಕೆಯಾಗುತ್ತಿದೆ. ಹೆಚ್ಚುತ್ತಿರುವ ಬೇಸಿಗೆಯ ಬಿಸಿಯಿಂದ (Heat Wave) ಜನಸಾಮಾನ್ಯರು ಕಂಗಾಲಾಗಿದ್ದಾರೆ. ಈ ನಡುವೆ ಸದ್ಯ ದೇಶದಲ್ಲಿ ಚುನಾವಣಾ ಕದನ ನಡೆಯುತ್ತಿದೆ. ಹಾಗಾಗಿ ಏರುತ್ತಿರುವ ತಾಪಮಾನದಿಂದ ರಾಜಕೀಯ ನಾಯಕರು ಕೂಡ ತೊಂದರೆಗೀಡಾಗಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಬಿಸಿಲಿನ ತಾಪವನ್ನು ಇಂದು ಎದುರಿಸಿದ್ದಾರೆ

ರಾಹುಲ್ ಗಾಂಧಿ (Rahul Gandhi) ಇಂದು ಉತ್ತರ ಪ್ರದೇಶ ಪ್ರವಾಸದಲ್ಲಿದ್ದರು. ವಿಪರೀತ ಬಿಸಿಲಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ರುದ್ರಪುರದ ವೇದಿಕೆಯಲ್ಲಿ ನಿಂತು ಭಾಷಣ ಮಾಡುತ್ತಿದ್ದಾಗಲೇ ತಲೆ ಮೇಲೆ ನೀರು ಸುರಿದುಕೊಂಡರು. ಸದ್ಯ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾಷಣದ ವೇಳೆ ರಾಗಾ ಅವರು ನೀರು ಕುಡಿಯಲು ಕೈಯಲ್ಲಿ ಮೊದಲು ಬಾಟ್ಲಿ (Water Bottle) ಹಿಡಿದುಕೊಂಡರು. ಆಗ ವೇದಿಕೆ ಮುಂಭಾಗ ನೆರೆದಿದ್ದ ಜನ ಜೋರಾಗಿ ಕೂಗಲಾರಂಭಿಸಿದರು. ಆ ವೇಳೆ ಇವತ್ತು ಬಿಸಿಲು ಜಾಸ್ತಿ ಎಂದವರೇ ರಾಗಾ ನೇರವಾಗಿ ತಲೆಗೆ ತಣ್ಣೀರು ಸುರಿದುಕೊಂಡರು. ಕಾಂಗ್ರೆಸ್‌ ನಾಯಕನ ನಡೆಗೆ ವೇದಿಕೆಯಲ್ಲಿದ್ದ ಹಲವರು ಅಚ್ಚರಿ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ವಿಡಿಯೋ ಮಾಡಿಕೊಳ್ಳಲು ಕಾಂಗ್ರೆಸ್‌ನವರು ಹೇಳಿದ್ರಾ : ತಂಗಡಗಿ ಪ್ರಶ್ನೆ

ಇದೇ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದರು. ಈ ಯುದ್ಧವು ಸಿದ್ಧಾಂತದ ಯುದ್ಧವಾಗಿದೆ. ಒಂದೆಡೆ ಭಾರತ ಅಘಾಡಿ, ಇನ್ನೊಂದೆಡೆ ಸಂವಿಧಾನ ಬದಲಿಸಬೇಕು ಎನ್ನುವ ಜನರಿದ್ದಾರೆ. ಬಿಜೆಪಿ ನಾಯಕರು ಸಂವಿಧಾನ ಬದಲಿಸುತ್ತೇವೆ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಆದರೆ ಭಾರತ ಅಘಾಡಿ ಇದನ್ನು ಎಂದಿಗೂ ಅನುಮತಿಸುವುದಿಲ್ಲ. ಬಾಬಾಸಾಹೇಬರು ರಚಿಸಿದ ಸಂವಿಧಾನದಿಂದ ದೇಶದ ಹಿಂದುಳಿದ ವರ್ಗದವರಿಗೆ ಹಕ್ಕು ಸಿಕ್ಕಿದೆ. ಈ ಸಂವಿಧಾನ ಅವರಿಗೆ ಮೀಸಲಾತಿ ನೀಡಿದೆ. ಆದರೆ ಬಿಜೆಪಿ ದಲಿತ ಸಂತ್ರಸ್ತರಿಗೆ ಮೀಸಲಾತಿಯನ್ನು ರದ್ದುಪಡಿಸಲು ಬಯಸುತ್ತಿದೆ ಎಂದು ಕಿಡಿಕಾರಿದರು.

ಅಗ್ನಿವೀರ್ ಯೋಜನೆ ವಿಚಾರದಲ್ಲಿ ಮೋದಿ ಸರ್ಕಾರವನ್ನು ಗುರಿಯಾಗಿಸಿದ ಅವರು, ಅಗ್ನಿವೀರ್ ಯೋಜನೆ ಮೂಲಕ ಮೋದಿ ಸರ್ಕಾರ ದೇಶದ ಸೈನಿಕರನ್ನು ಕಾರ್ಮಿಕರನ್ನಾಗಿ ಪರಿವರ್ತಿಸುವ ಕೆಲಸ ಮಾಡಿದೆ. ಈಗ ಗಡಿಯಲ್ಲಿ ಹುತಾತ್ಮರಾದರೆ ಅವರಿಗೆ ಪಿಂಚಣಿ, ಹುತಾತ್ಮ ಸ್ಥಾನಮಾನ ಸಿಗುವುದಿಲ್ಲ. ಆದರೆ ಭಾರತ ಮೈತ್ರಿ ಸರ್ಕಾರ ಬಂದರೆ, ನಾವು ಈ ಯೋಜನೆಯನ್ನು ರದ್ದುಗೊಳಿಸುತ್ತೇವೆ ಎಂದು ಅವರು ಭರವಸೆ ಕೊಟ್ಟರು.

Share This Article