ಸಿದ್ದು-ಡಿಕೆಶಿಯನ್ನ ಪದೇ ಪದೇ ಜೋಡಿಸಿ ನಿಲ್ಲಿಸುವ ರಾಹುಲ್ – ಜೋಡಣೆ ಅಸಲಿ ಆಟ ಏನ್ ಗೊತ್ತಾ?

Public TV
3 Min Read

ಬೆಂಗಳೂರು: ಜೋಡ್ಸಿ ನಿಲ್ಲಿಸೋದು.. ಇಬ್ಬರ‌ ಮುಖದಲ್ಲಿ ನಗು ಮೂಡಿಸೋದು… ನನ್ನ ಸಂದೇಶ ಅರ್ಥ ಆಗ್ತಿದೆ ಅಂತಾ ಅಂದುಕೊಳ್ಳೋದು. ಇದು ರಾಹುಲ್ ಗಾಂಧಿಯ (Rahul Gandhi) ಜೋಡೋ ತಂತ್ರ. ಅಂದಹಾಗೆ ಇದು ಭಾರತ್ ಜೋಡೋ ಯಾತ್ರೆಯಲ್ಲೇ (Bharat Jodo Yatra) ನಡೆದ ಇನ್ನೊಂದು ಭಾಗ ಸಿದ್ದು-ಡಿಕೆಶಿ ಜೋಡೋ. ಕರ್ನಾಟಕದ ಭಿನ್ನರಾಗಗಳನ್ನ ಸರಿಪಡಿಸಿ ಲಯಬದ್ಧ ರಾಗವಾಗಿಸಲು ರಾಹುಲ್ ಗಾಂಧಿ ಪ್ರಯತ್ನಿಸಿದ್ರು ಅಂದರೂ ತಪ್ಪಾಗಲಾರದು. ಯಾತ್ರೆಯಲ್ಲಿ ಒಳಸುಳಿಯೊಳಗೆ ಕರ್ನಾಟಕದ ನಾಯಕತ್ವದ ಭಿನ್ನ ಧ್ವನಿಗಳನ್ನ ಹತ್ತಿಕ್ಕಲು ಸಿದ್ದು-ಡಿಕೆ (Siddaramaiah – D.K.Shivakumar) ಜೋಡೋ ಅಂತಾ ಸಂದೇಶ ರವಾನಿಸಿದ್ದು ಸ್ಪಷ್ಟವಾಗಿದೆ.

ಕರ್ನಾಟಕ ಕಾಂಗ್ರೆಸ್ (Congress) ಪಾಲಿಗೆ ಕಲ್ಪವೃಕ್ಷ. ದೇಶದಲ್ಲಿ ಏನಾದ್ರೂ ಕಾಂಗ್ರೆಸ್ ಫಿಟ್ & ಫೈನ್ ಆಗಿದೆ ಅಂದ್ರೆ ಅದು ಕರ್ನಾಟಕದಲ್ಲಿ (Karnataka) ಅನ್ನೋದು ಗೊತ್ತು. ಆದರಲ್ಲೂ ಲೀಡರ್‌ಶಿಪ್ ವಿಚಾರದಲ್ಲಿ ಒಂಟೆತ್ತಿನ ಗಾಡಿಗಿಂತ ಜೋಡೆತ್ತಿನ ಗಾಡಿ ಅತ್ಯಾವಶ್ಯಕ ಅನ್ನುವ ಸತ್ಯವೂ ಕಾಂಗ್ರೆಸ್ ಹೈಕಮಾಂಡ್‌ಗೆ ಸ್ಪಷ್ಟವಾಗಿದೆ. ಆ ಕಾರಣಕ್ಕಾಗಿಯೇ ಸಿದ್ದು-ಡಿಕೆಶಿಯನ್ನ ಸಮನಾಗಿ ಎತ್ತಿ ಮುದ್ದಾಡಿಸುವ ಕೆಲಸಕ್ಕೆ ರಾಹುಲ್ ಗಾಂಧಿ ಕೈ ಹಾಕಿದ್ದಾರೆ ಅನ್ನುವ ಸತ್ಯ ಎಲ್ಲರಿಗೂ ಗೊತ್ತಿದೆ. ಇದನ್ನೂ ಓದಿ: ಬಚ್ಚಾ ಲಡಾಯಿ ನಡುವೆ ರಾಮ ರಾಜಕೀಯ- ಕಾಂಗ್ರೆಸ್ ರಾಮಜಪಕ್ಕೆ ಕೇಸರಿಪಡೆ ವ್ಯಂಗ್ಯ

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿಯೇ ಆ ಜೋಡಣೆಯ ಕೆಲಸ ಮಾಡಿದ್ರು ರಾಹುಲ್. ಸಿದ್ದರಾಮಯ್ಯ ಬಲ‌ಪ್ರದರ್ಶನದ ವೇದಿಕೆಯಲ್ಲೇ ಸಿದ್ದರಾಮಯ್ಯ ಆಲಂಗಿಸುವಂತೆ ಡಿಕೆಶಿಗೆ ರಾಹುಲ್ ಸನ್ನೆ ಮಾಡಿದಾಗಲೇ ಎಲ್ಲರಿಗೂ ಅರ್ಥವಾಗಿತ್ತು. ಜೋಡಣೆ ಕಾರ್ಯ ಪ್ರಗತಿಯಲ್ಲಿದೆ ಎಂಬ ಸಂದೇಶ ಹೊರಬಿತ್ತು. ಆದಾದ ಬಳಿಕ ಇದೊಂದು ತಾತ್ಕಾಲಿಕ ಆಲಿಂಗನ ಮುಂದೆ ಯಾವಾಗ ಡೈವೈರ್ಸ್ ಆಗುತ್ತೋ ಅಂತಾ ಬಿಜೆಪಿ ನಾಯಕರು ವ್ಯಂಗ್ಯ ಮಾಡಿದ್ದು ಉಂಟು.

ಇನ್ನು ಬಿಜೆಪಿ ವ್ಯಂಗ್ಯಕ್ಕೆ ಇಂಬು ನೀಡುವಂತೆ ರಾಹುಲ್ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಾಗಲೇ ಮತ್ತೆ ಜೋಡೆತ್ತುಗಳು ದಿಕ್ಕಪಾಲಾಗುವ ಮುನ್ಸೂಚನೆ ಕೊಟ್ಟವು. ಎಡಕ್ಕೆ ಒಂದೆತ್ತು, ಬಲಕ್ಕೆ ಇನ್ನೊಂದೆತ್ತು ಎಳೆದಿದ್ದು ಸ್ಪಷ್ಟವಾಗಿತ್ತು. ರಾಹುಲ್ ಸ್ವಾಗತಕ್ಕೆ ಕಾಡಿನ ಮಧ್ಯೆಯೇ ಹೋಗಿ ಸಿದ್ದರಾಮಯ್ಯ ಟೀಂ ನಾವೇ ಫಸ್ಟ್ ಅಂತಾ ಬೆನ್ನು ತಟ್ಟಿಕೊಂಡ್ರೆ, ನಮಗೆ ಜವಾಬ್ದಾರಿ ಕೆಲಸ ಇವೆ, ಅಲ್ಲಿ ಹೋಗುವ ಪ್ಲ್ಯಾನ್ ಇರಲಿಲ್ಲ ಅಂತಾ ಡಿಕೆಶಿ ಗುರ್ ಅಂದಿದ್ದು ಪಕ್ಷದೊಳಗೆ ನಾನಾ ಚರ್ಚೆ ಶುರುವಾಗಿಬಿಡ್ತು. ಈ ಮೇಲ್ನೋಟದ ಆಟ ಗೊತ್ತಿರದಷ್ಟೂ ದಡ್ಡರಲ್ಲ ರಾಹುಲ್. ಕರ್ನಾಟಕದ ವಸ್ತುಸ್ಥಿತಿ ರಾಹುಲ್‌ಗೆ ಸ್ಪಷ್ಟವಾಗಿ ತಿಳಿದಿದೆ ಅನ್ನೋದನ್ನ ನನ್ನ ಗಮನಕ್ಕೆ ಬಂದಿದ್ದೇ ಅವರ ಬಳಿ ಅನೌಪಚಾರಿಕವಾಗಿ ಮಾತನಾಡಿದಾಗ. ಆ ಕಾರಣಕ್ಕೇನೋ ರಾಹುಲ್ ಅವರು ಸಿದ್ದರಾಮಯ್ಯ, ಡಿಕೆಶಿಗೆ ಸಮಾನ ಸ್ಥಾನ, ಸಮಾನ ಓಟ, ಸಮಾನ ಅವಕಾಶ ಎಂಬ ಗೇಮ್ ಪ್ಲ್ಯಾನ್ ಮಾಡಿದ್ದು. ಇದನ್ನೂ ಓದಿ: ಬನ್ನಿ, ಕರ್ನಾಟಕದಲ್ಲಿ ಬಂಡವಾಳ ಹೂಡಿ: ಆಂಧ್ರ, ತೆಲಂಗಾಣ ಉದ್ಯಮಿಗಳಿಗೆ ಸಚಿವ ನಿರಾಣಿ ಕರೆ

ಅಂದಹಾಗೆ ಭಾರತ್ ಜೋಡೋ ಪಾದಯಾತ್ರೆ ವೇಳೆ ಮೊದಲು ಸಿದ್ದರಾಮಯ್ಯ ಅವರನ್ನ ಓಡಿಸ್ತಾರೆ.‌ ಡಿಕೆಶಿ ಇಡಿ ವಿಚಾರಣೆಗೆ ಹೋದಾಗ ಸಿದ್ದರಾಮಯ್ಯ ಓಡಿದ್ದೇ ದೊಡ್ಡ ಸುದ್ದಿಯಾಗಿತ್ತು. ಆ ಸುದ್ದಿ ಬೇರೆ ರೂಪ ಪಡೆಯುವ ಮೊದಲೇ ಮಾರನೇ ದಿನವೇ ಡಿಕೆಶಿಯನ್ನ ರಾಹುಲ್ ಓಡಿಸ್ತಾರೆ.‌ ಒಬ್ಬರು‌ ಮಾರ್ನಿಂಗ್ ಶಿಫ್ಟ್ ಬಂದು ಜಾಸ್ತಿ ಕಾಣಿಸಿಕೊಂಡ್ರೆ, ಸೆಕೆಂಡ್ ಶಿಫ್ಟ್‌ನಲ್ಲಿ ಇನ್ನೊಬ್ಬರು ಬಂದು ಜಾಸ್ತಿ ‌ಕಾಣಿಸಿಕೊಳ್ತಾರೆ.‌ ಸಿದ್ದು-ಡಿಕೆಶಿ ಇಬ್ಬರ ವಿಚಾರದಲ್ಲಿ ಯಾರೂ ಹೆಚ್ಚಿಲ್ಲ, ಯಾರೂ ಕಮ್ಮಿ ಇಲ್ಲ ಎಂಬ ಸಂದೇಶವನ್ನು ಕೊಡಲು ರಾಹುಲ್‌ ಕೂಡ ಬಹಳ ಸಲ ಪ್ರಯತ್ನಿಸಿದ್ದಾರೆ.

ಅದರಂತೆ ಬಳ್ಳಾರಿ ಪ್ರವೇಶ ಮಾಡುವ ಮುನ್ನ ಸಿದ್ದು-ಡಿಕೆಶಿ ಇಬ್ಬರನ್ನೂ ಒಟ್ಟಿಗೆ ಕೈ ಕೈ ಹಿಡಿಸಿ ಅವರ ಭುಜದ ಮೇಲೆ ರಾಹುಲ್ ಕೈ ಹಾಕಿ ಹೆಜ್ಜೆ ಹಾಕಿಸಿದ್ರು‌. ಇದೆಲ್ಲ ರಾಹುಲ್ ಹುಡುಗಾಟಿಕೆಗೆ ಮಾಡಿದ್ದಲ್ಲ. ರಾಹುಲ್ ಬಹಳ ಮೆಚ್ಯುರ್ಡ್ ಆಗಿ ಪೊಲಿಟಿಕಲ್ ಥಿಂಕ್ ಮಾಡುವುದನ್ನ ಬಹಳ ಚೆನ್ನಾಗಿ ಕಲಿತಿದ್ದಾರೆ ಅಂತಾ ನನಗಿನಿಸಿದೆ. ಪಂಜಾಬ್ ಪೆಟ್ಟು ತಿಂದ ಹಸ್ತಕ್ಕೀಗ ಕರ್ನಾಟಕದ ಭವಿಷ್ಯ ಚೆನ್ನಾಗಿ ಗೊತ್ತಾಗಿರಬೇಕು. ಹಾಗಾಗಿಯೇ ರಾಹುಲ್ ಭಾರತ್ ಜೋಡೋ ಯಾತ್ರೆಯ ಜೊತೆ ಜೊತೆಯಲ್ಲಿ ಕರ್ನಾಟಕದಲ್ಲಿ ಸಿದ್ದು-ಡಿಕೆಶಿ ಜೋಡೋ ಸಂದೇಶವನ್ನು ಅಚ್ಚುಕಟ್ಟಾಗಿ ಮಾಡಿ‌ ಮುಗಿಸಿದ್ದಾರೆ. ಇನ್ನೇನಿದ್ದರೂ ಜೋಡಣೆ ಆಗಬೇಕಿರುವುದು ಸಿದ್ದರಾಮಯ್ಯ, ಶಿವಕುಮಾರ್ ಮನಸ್ಸುಗಳು. ಅಷ್ಟೇ ಅಲ್ಲ ಇಬ್ಬರು ನಾಯಕರ ಬೆನ್ನ ಹಿಂದಿನ ಶಕ್ತಿಗಳು, ಅಕ್ಕಪಕ್ಕದ ಕಾಣದ ಕೈಗಳು ಜೋಡಣೆ ಆಗಬೇಕು. ಆಗ ಮಾತ್ರ ರಾಹುಲ್ ಗಾಂಧಿಯ ಜೋಡಣೆ ಪ್ರಯತ್ನ ಯಶಸ್ವಿಯಾಗಲು ಸಾಧ್ಯ. ಅದಕ್ಕಾಗಿ ವರ್ಷಗಟ್ಟಲೇ ಕಾಯಬೇಕಾಗಿಲ್ಲ. ಇನ್ನು ಐದಾರು ತಿಂಗಳಲ್ಲಿ ಆ ರಿಸಲ್ಟ್ ಕೂಡ ಸಿಗುತ್ತೆ. ಅಲ್ಲಿ ತನಕ ಕಾದುನೋಡೋಣ.

-ರವೀಶ್ ‌.ಹೆಚ್‌.ಎಸ್. ಪೊಲಿಟಿಕಲ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *