ಟೆಸ್ಟಿಂಗ್ ಕಿಟ್ ಖರೀದಿಸುವಲ್ಲಿ ಭಾರತ ತಡ ಮಾಡಿದೆ: ರಾಹುಲ್ ಗಾಂಧಿ

Public TV
3 Min Read

– ಇದೀಗ ಕೊರತೆ ಉಂಟಾಗಿದೆ

ನವದೆಹಲಿ: ಕೊರೊನಾ ಟೆಸ್ಟಿಂಗ್ ಕಿಟ್‍ಗಳನ್ನು ಖರೀದಿಸುವಲ್ಲಿ ಕೇಂದ್ರ ಸರ್ಕಾರ ತಡ ಮಾಡಿದೆ, ಹೀಗಾಗಿ ಟೆಸ್ಟಿಂಗ್ ಕಿಟ್‍ಗಳ ಕೊರತೆ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರತಿ ಮಿಲಿಯನ್ ಭಾರತೀಯರಿಗೆ ಕೇವಲ 149 ಜನರನ್ನು ಟೆಸ್ಟ್ ಮಾಡುತ್ತಿದ್ದೇವೆ. ಲಾವೋಸ್ (157), ನೈಜರ್(182) ಹಾಗೂ ಹೊಂಡುರಾನ್(162)ಗಳಂತಹ ಸಣ್ಣ ದೇಶಗಳ ರೀತಿ ಭಾರತದಲ್ಲಿ ಟೆಸ್ಟಿಂಗ್ ಆಗುತ್ತಿದೆ. ಸಾಮೂಹಿಕ ಪರೀಕ್ಷೆ ಕೊರೊನಾ ವಿರುದ್ಧ ಹೋರಾಟದ ಕೀಲಿ ಕೈ ಆಗಿದೆ. ಪ್ರಸ್ತುತ ಆಟದಲ್ಲಿ ನಾವು ಎಲ್ಲಿಯೂ ಇಲ್ಲ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈ ಮೂಲಕ ಟೆಸ್ಟಿಂಗ್ ಕಿಟ್‍ಗಳ ಕೊರತೆ ಇದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಪ್ರಸ್ತುತ 10,363 ಪ್ರಕರಣಗಳು ಪತ್ತೆಯಾಗಿದ್ದು, 339 ಜನ ಸಾವನ್ನಪ್ಪಿದ್ದಾರೆ. ಇತರ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಸಂಖ್ಯೆಗಳು ತುಂಬಾ ಕಡಿಮೆ. ಭಾರತ ಹೆಚ್ಚು ಪರೀಕ್ಷೆ ನಡೆಸದ ಕಾರಣ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚು ಪರೀಕ್ಷೆ ನಡೆಸಿದರೆ ನೈಜ ಪ್ರಮಾಣ ತಿಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಟಲಿ ಪ್ರತಿ ಮಿಲಿಯನ್ ಜನರ ಪೈಕಿ 15,935 ಜನರನ್ನು ಪರೀಕ್ಷೆಗೆ ಒಳಪಡಿಸಿದೆ. ಅದೇ ರೀತಿ ಅಮೆರಿಕಾ 8,138 ಜನರನ್ನು ಪರೀಕ್ಷೆಗೆ ಒಳಪಡಿಸಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಆಹಾರ, ಔಷಧಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಯಾರು ಹೆದರುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರ ವರೆಗೆ ದೇಶಾದ್ಯಂತ ಲಾಕ್‍ಡೌನ್ ವಿಸ್ತರಣೆ ಮಾಡಿದ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿ ಜನ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಗೃಹ ಸಚಿವನಾಗಿ ಔಷಧಿ, ಆಹಾರ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳು ದೇಶದಲ್ಲಿ ಬೇಕಾದಷ್ಟಿದೆ ಎಂದು ದೇಶದ ಪ್ರಜೆಗಳಿಗೆ ಭರವಸೆ ನೀಡುತ್ತಿದ್ದೇನೆ. ಯಾರೂ ಈ ಬಗ್ಗೆ ಚಿಂತಿಸಬೇಕಿಲ್ಲ. ಶ್ರೀಮಂತರು ಬಡವರಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತೇನೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರದ ಜೊತೆ ರಾಜ್ಯಗಳು ಕೈ ಜೋಡಿಸಿದ್ದು, ಸಹಕಾರ ನೀಡುತ್ತಿವೆ. ಘೋಷಣೆಯಾಗಿರುವ ಲಾಕ್‍ಡೌನ್ ಪಾಲಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸ್ಯಾನಿಟೈಸೇಷನ್ ಸಿಬ್ಬಂದಿ, ಪೊಲೀಸರು ಹಾಗೂ ಎಲ್ಲ ಭದ್ರತಾ ಸಿಬ್ಬಂದಿ ಕೊಡುಗೆ ಮಹತ್ತರವಾದದ್ದು. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಅವರ ಕೆಲಸ ನಮಗೆಲ್ಲ ಪ್ರೇರಣೆಯಾಗಬೇಕು. ಎಲ್ಲರೂ ನಿಯಮವನ್ನು ಪಾಲಿಸಿ ಇವರ ಕೆಲಸಕ್ಕೆ ಸಹಕರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *