ಕುಮಾರ್ ವಿಶ್ವಾಸ್ ಆರೋಪದ ಬಗ್ಗೆ ಸ್ಪಷ್ಟನೆ ನೀಡಿ: ಕೇಜ್ರಿವಾಲ್‍ಗೆ ರಾಹುಲ್ ಪ್ರಶ್ನೆ

Public TV
3 Min Read

ನವದೆಹಲಿ: ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಪಕ್ಷದ ಮಾಜಿ ಸಹೋದ್ಯೋಗಿ ಕುಮಾರ್ ವಿಶ್ವಾಸ್ ಮಾಡಿರುವ ಆರೋಪ ನಿಜವೇ ಎಂದು ಸ್ಪಷ್ಟಪಡಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಳಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ಸಂಸ್ಥಾಪಕರಲ್ಲಿ ಒಬ್ಬರಾದ ವಿಶ್ವಾಸ್, ಕೇಜ್ರಿವಾಲ್ ಅವರು ಪಕ್ಷದಲ್ಲಿದ್ದಾಗ ಪಂಜಾಬ್‍ನಲ್ಲಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಿದ್ದರು ಎಂದು ಆರೋಪಿಸಿದ್ದರು. ಇದನ್ನೂ ಓದಿ: ಪಂಜಾಬ್ ಸಿಎಂ ಅಥವಾ ಖಲಿಸ್ತಾನ್ ಪಿಎಂ – ಕುಮಾರ್ ವಿಶ್ವಾಸ್ ವೀಡಿಯೋ ವೈರಲ್

ಇದೀಗ ಈ ವಿಚಾರವಾಗಿ ರಾಹುಲ್ ಗಾಂಧಿ ಅವರು, ಕೇಜ್ರಿವಾಲ್ ಅವರೇ ನೇರ ಉತ್ತರ ಕೊಡಿ, ಕುಮಾರ್ ವಿಶ್ವಾಸ್ ಹೇಳುತ್ತಿರುವುದು ಸತ್ಯವೇ? ಹೌದು ಅಥವಾ ಇಲ್ಲ ಎಂದು ಉತ್ತರಿಸಿ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನಾನು ಕೂಡ ಪ್ರತ್ಯುತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಂದೆಡೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಟ್ವಿಟ್ಟರ್‍ನಲ್ಲಿ ತಮ್ಮ ಪಕ್ಷದ ಸಂಸ್ಥಾಪಕ ಕುಮಾರ್ ವಿಶ್ವಾಸ್ ನೀಡಿರುವ ಹೇಳಿಕೆ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸ್ಪಷ್ಟನೆ ನೀಡಬೇಕು. ಕುಮಾರ್ ವಿಶ್ವಾಸ್ ಹೇಳಿಕೆಗೆ ಕೇಜ್ರಿವಾಲ್ ಏಕೆ ಪ್ರತಿಕ್ರಿಯಿಸುತ್ತಿಲ್ಲ? ಸರಳ ಪ್ರಶ್ನೆಗೆ ಅರವಿಂದ್ ಕೇಜ್ರಿವಾಲ್ ಏಕೆ ಉತ್ತರಿಸುತ್ತಿಲ್ಲ? ಕುಮಾರ್ ವಿಶ್ವಾಸ್ ಹೇಳಿದ್ದು ನಿಜವೋ ಸುಳ್ಳೋ ಎಂದು ಪ್ರಶ್ನಿಸಿದ್ದಾರೆ.

ಪ್ರಶ್ನೆಗೆ ಉತ್ತರಿಸುವ ಬದಲಿಗೆ ಕೇಜ್ರಿವಾಲ್ ಸಮಸ್ಯೆಯನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ತಮ್ಮನ್ನು ಭಗತ್ ಸಿಂಗ್‍ಗೆ ಹೋಲಿಸಿಕೊಳ್ಳುವುದು ಅವಮಾನಕರ ಸಂಗತಿಯಾಗಿದ್ದು ಈ ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದಿದ್ದಾರೆ.  ಇದನ್ನೂ ಓದಿ: ರಾಹುಲ್ ಗಾಂಧಿಯು ದಿ.ರಾಜೀವ್ ಗಾಂಧಿ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ? – ಅಸ್ಸಾಂ ಸಿಎಂ ವಿರುದ್ಧ ಪ್ರಕರಣ

ಈ ಮುನ್ನ ಅರವಿಂದ್ ಕೇಜ್ರಿವಾಲ್ ಅವರು ಈ ಭ್ರಷ್ಟರೆಲ್ಲ ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಶಾಲೆಗಳು, ಆಸ್ಪತ್ರೆಗಳನ್ನು ನಿರ್ಮಿಸುವ, ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸುವ ವಿಶ್ವದ ಮೊದಲ ಭಯೋತ್ಪಾದಕ ನಾನು. ನಾನು ವಿಶ್ವದ ಮೊದಲ ‘ಸಿಹಿ’ ಭಯೋತ್ಪಾದಕ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಬ್ರಿಟಿಷರು ಭಗತ್ ಸಿಂಗ್‍ಗೆ ಭಯಪಡುತ್ತಿದ್ದರು ಮತ್ತು ಅದಕ್ಕಾಗಿಯೇ ಅವರನ್ನು ಭಯೋತ್ಪಾದಕ ಎಂದು ಕರೆಯಲಾಗುತ್ತಿತ್ತು. ನಾನು ಭಗತ್ ಸಿಂಗ್ ಅವರ ಶಿಷ್ಯ ಎಂದು ಹೇಳಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *