ಮೋದಿ ರೆಡಾರ್ ಹೇಳಿಕೆಯನ್ನ ಅಸ್ತ್ರವಾಗಿಸಿಕೊಂಡ ರಾಹುಲ್-ಪ್ರಿಯಾಂಕ

Public TV
2 Min Read

ನವದೆಹಲಿ: 2019ರ ಲೋಕಸಭಾ ಚುನಾವಣೆಯ ಅಂತಿಮಘಟ್ಟ ತಲುಪಿದ್ದು, ಮೇ 19ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಕೊನೆಯ ಹಂತದ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ತಮ್ಮ ಭಾಷಣಗಳಲ್ಲಿ ಪ್ರಧಾನಿ ಮೋದಿಯವರ ಹೇಳಿಕೆಗಳನ್ನು ಬಳಸಿ ಕುಟುಕುತ್ತಿದ್ದಾರೆ.

ವಾತಾವರಣ ಸರಿ ಇಲ್ಲದಿದ್ರೆ ವಿಮಾನಗಳು ರೆಡಾರ್ ಸಂಪರ್ಕವನ್ನು ಕಳೆದುಕೊಳ್ಳುತ್ತವೆ ಎಂದು ಪ್ರಧಾನಿ ಮೋದಿ ಹೇಳ್ತಾರೆ. ಭಾರತದಲ್ಲಿ ಮಳೆಯಿಂದಾಗಿ ಹವಾಮಾನದಲ್ಲಿ ವೈಪರೀತ್ಯ ಉಂಟಾದ್ರೆ ನಮ್ಮ ವಿಮಾನಗಳು ರೆಡಾರ್ ಸಂಪರ್ಕವನ್ನ ಕಳೆದುಕೊಳ್ಳುತ್ತವಾ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.

ಮಧ್ಯ ಪ್ರದೇಶದ ಸಮಾವೇಶದಲ್ಲಿ ಮಾತನಾಡುತ್ತಾ, ಮೋದಿಜೀ ಅಧಿಕಾರಿಗಳಿಗೆ ಮತ್ತು ವಾಯಸೇನೆಯ ಮುಖ್ಯಸ್ಥರಿಗೆ ಹವಾಮಾನ ವೈಪರೀತ್ಯ ನಮಗೆ ಲಾಭದಾಯಕವಾಗಿರಲಿದೆ. ಪಾಕಿಸ್ತಾನದ ರೆಡಾರ್ ನಮ್ಮ ವಿಮಾನಗಳನ್ನು ಟಾರ್ಗೆಟ್ ಮಾಡಲ್ಲ ಎಂದು ಹೇಳುತ್ತಾರೆ. ಕಳೆದ ಐದು ವರ್ಷಗಳಲ್ಲಿ ಏನು ಯುವಕರಿಗೆ ಉದ್ಯೋಗ ನೀಡಲು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕ ಗಾಂಧಿ, ಪ್ರಧಾನಿಗಳ ಹೇಳಿಕೆಯನ್ನು ಗೇಲಿ ಮಾಡಿದ್ದಾರೆ. ತಾನೇ ದೊಡ್ಡ ರಕ್ಷಣಾತಜ್ಞ ಎಂದು ಹೇಳುವ ವಿಶೇಷ ವ್ಯಕ್ತಿ ಯುದ್ಧ ವಿಮಾನ ತಯಾರಿಕೆಯನ್ನು ಯಾರಿಗೆ ನೀಡಬೇಕೆಂದು ನಿರ್ಧರಿಸುತ್ತಾರೆ. ಇದೂವರೆಗೂ ವಿಮಾನ ನಿರ್ಮಿಸದ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ಭೂಮಿ ನೀಡುತ್ತಾರೆ. ಕಳೆದ 50 ವರ್ಷಗಳಿಂದ ವಿಮಾನಗಳನ್ನ ತಯಾರಿಸಿಕೊಂಡಿರುವ ಹೆಚ್‍ಎಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲ್ಲ ಎಂದು ರಫೇಲ್ ವಿಚಾರ ಪ್ರಸ್ತಾಸಿದರು.

ಇಷ್ಟು ದೊಡ್ಡ ವಿಶೇಷ ರಕ್ಷಣಾತಜ್ಞ, ಮೋಡ ಮುಸುಕಿದ ವಾತಾವರಣವಿದೆ, ವಿಮಾನಗಳು ರೆಡಾರ್ ಸಂಪರ್ಕಕ್ಕೆ ಸಿಗಲ್ಲ ಎಂದು ಹೇಳುತ್ತಾರೆ. ಮಳೆಯ ವಾತಾವರಣವೇ ಇರಲಿ, ಬಿಸಿಲೇ ಇರಲಿ. ಎಲ್ಲರೂ ನಿಮ್ಮ ರಾಜನೀತಿಯ ಮರ್ಮವನ್ನು ಅರಿತುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ಹೇಳಿದ್ದೇನು?
ದಾಳಿಯ ಮುನ್ನ ರಾತ್ರಿ 9 ಗಂಟೆಗೆ ರಿವ್ಯೂವ್ ಮಾಡಿದೆ. ಮತ್ತೊಮ್ಮೆ ರಾತ್ರಿ 12 ಗಂಟೆಗೆ ದಾಳಿಯ ಪ್ಲಾನ್ ನೋಡಿದೆ. ಅಂದು ರಾತ್ರಿ ಹೆಚ್ಚು ಮಳೆಯಾಗಿದ್ದರಿಂದ ನಮ್ಮ ರೆಡಾರ್ ಕೆಟ್ಟಿತ್ತು. ದಾಳಿಗೆ ವಾತಾವರಣ ಸಹಕರಿಸುತ್ತಿಲ್ಲ. ಹಾಗಾಗಿ ಸರ್ಜಿಕಲ್ ಸ್ಟ್ರೈಕ್ ದಾಳಿಯ ದಿನಾಂಕ ಬದಲಿಸೋಣ ಎಂಬ ಸಲಹೆಯನ್ನು ತಜ್ಞರು ನೀಡಿದರು. ದಾಳಿಯ ರಹಸ್ಯವನ್ನು ಎಲ್ಲಿಯೂ ಲೀಕ್ ಆಗಿರಲಿಲ್ಲ. ಒಂದು ವೇಳೆ ದಿನಾಂಕ ಮುಂದೂಡಿದ್ರೆ ದಾಳಿಯ ರಹಸ್ಯ ಲೀಕ್ ಆದ್ರೆ ಹೇಗೆ ಎಂಬ ಸಂಶಯ ಕಾಡಿತ್ತು. ಮೋಡಗಳಿಂದ ನಮ್ಮ ರೆಡಾರ್ ಕೆಲಸ ಮಾಡುತ್ತಿಲ್ಲ. ಹಾಗೆ ಶತ್ರುಗಳ ರೆಡಾರ್ ಸಹ ಕೆಲಸ ಮಾಡುತ್ತಿರಲ್ಲ. ಕೆಲವು ಸಾರಿ ಮೋಡಗಳು ಸಹಾಯ ಮಾಡುತ್ತವೆ. ನಾವು ರೆಡಾರ್ ನಿಂದ ಸಲೀಸಾಗಿ ತಪ್ಪಿಸಿಕೊಳ್ಳಬಹುದು. ಎಲ್ಲ ಅಧಿಕಾರಿಗಳು ಗೊಂದಲದಲ್ಲಿದ್ದಾಗ ಹೋಗಿ ದಾಳಿ ನಡೆಸಿ ಎಂದು ಅದೇಶಿಸಿದೆ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *