ನಾಟಿ ಕೋಳಿ ಸಂಬಾರ್ ಜೊತೆ ರಾಗಿಮುದ್ದೆ ತಿನ್ನೋ ಸ್ಪರ್ಧೆ: ಮೀಸೆ ಹೀರೇಗೌಡ ಚಾಂಪಿಯನ್

Public TV
2 Min Read

ಮಂಡ್ಯ: ಸಕ್ಕರೆ ನಾಡಿನ ಗ್ರಾಮೀಣ ಸೊಗಡಿನ ಜನ ರಾಗಿ ಮುದ್ದೆಯನ್ನು ನುಂಗುವುದನ್ನು ಕ್ರೀಡೆಯಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಅದ್ದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಭಾನುವಾರ ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಜನತಾ ಟಾಕೀಸ್ ಮತ್ತು ನಮ್ಮ ಹೈಕ್ಳು ತಂಡ ನೆಲದನಿ ಬಳಗ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಾಟಿ ಕೋಳಿ ಸಾಂಬಾರ್ ನಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆ ಯಾವ ಕ್ರೀಡೆಗೂ ಕಡಿಮೆ ಇಲ್ಲದಂತೆ ನಡೆಯಿತು.

ಮಂಗಲ ಗ್ರಾಮದ ಶ್ರೀ ಮಾರಮ್ಮನ ದೇವಾಲಯದ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ 62 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಅತಿ ಹೆಚ್ಚು ಮುದ್ದೆ ತಿಂದವರು ವಿಜಯಶಾಲಿಗಳು ಎಂದು ತೀರ್ಪುಗಾರರು ಸಮಯ ನಿಗದಿಪಡಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ಹೀರೇಗೌಡ ಅರ್ಧ ಕೆ.ಜಿ. ತೂಕದ ಆರೂವರೆ ಮುದ್ದೆ ತಿನ್ನುವ ಮೂಲಕ ಸ್ಪರ್ಧೆಯಲ್ಲಿ ಜಯಗಳಿಸಿದರು.

ಸ್ಪರ್ಧೆಯಲ್ಲಿ ಜಯ ಪಡೆದ ಹೀರೇಗೌಡ ಅವರಿಗೆ ಐದು ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಅಂದಹಾಗೇ ಪ್ರಥಮ ಬಹುಮಾನ ಪಡೆದ ಹೀರೇಗೌಡ ಅವರು ರಾಗಿ ಮುದ್ದೆ ನುಂಗುವ ಸ್ಪರ್ಧೆಯಲ್ಲಿ 9 ಬಾರಿ ಪ್ರಥಮ ಬಹುಮಾನ ಪಡೆದಿದ್ದಾರೆ. ಈ ಸ್ಪರ್ಧೆಗೆ ಸೂನಗನಹಳ್ಳಿ ರಾಜು ನಿರ್ದೇಶನದ ಆನೆಬಾಲ ಸಿನಿಮಾ ತಂಡವು ಸಹ ಈ ಸಹಯೋಗ ನೀಡಿದ್ದು, ಆ ಸಿನಿಮಾದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ನಟನೆಗೆ ಅವಕಾಶ ಸಹ ಕೊಡಲಾಗುವುದು ಹೇಳಲಾಗಿತ್ತು. ಅದರಂತೆ ಮೊದಲ ಬಹುಮಾನ ವಿಜೇತ ಹೀರೇಗೌಡ ಆನೆಬಾಲ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.

ಇನ್ನು ಸ್ಪರ್ಧೆಯಲ್ಲಿ ಸುರೇಶ್ ಎಂಬವರು ಐದೂವರೆ ಮುದ್ದೆ ತಿಂದು ಮೂರು ಸಾವಿರ ರೂ. ನಗದು ಬಹುಮಾನ ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು. ನಾಲ್ಕೂವರೆ ಮುದ್ದೆ ತಿಂದ ರಾಮಮೂರ್ತಿ ಎರಡು ಸಾವಿರ ರೂ. ನಗದು ಬಹುಮಾನ ಪಡೆದು ತೃತೀಯ ಬಹುಮಾನ ಪಡೆದಿದ್ದಾರೆ. ಈ ಮೂವರು ಸೇರಿದಂತೆ ಹೆಚ್ಚು ಮುದ್ದೆ ತಿಂದ ಇನ್ನು ನಾಲ್ಕು ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಈ ವೇಳೆ ಮಾತನಾಡಿದ ಸ್ಪರ್ಧೆ ಆಯೋಜಕರಾದ ಮಂಗಲ ಲಂಕೇಶ್, ಗ್ರಾಮೀಣ ಸೊಗಡಿನ ಕ್ರೀಡೆಗಳ ಪೈಕಿ ರಾಗಿ ಮುದ್ದೆ ತಿನ್ನುವುದು ಸಹ ಒಂದು ಕ್ರೀಡೆಯಾಗಿದ್ದು, ಇಂತಹ ಗ್ರಾಮೀಣ ಸೊಗಡಿನ ರಾಗಿ ಮುದ್ದೆ ನುಂಗುವ ಸ್ಪರ್ಧೆಯನ್ನು ಮತ್ತೆ ಮತ್ತೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಎಚ್.ಡಿ.ದೇವೇಗೌಡರು ಪ್ರಧಾನಿಯಾದಾಗ ತಮ್ಮ ನೆಚ್ಚಿನ ರಾಗಿ ಮುದ್ದೆ ಸವಿಯಲು ಬೆಂಗಳೂರಿನಿಂದ ರಾಜಧಾನಿ ದೆಹಲಿಗೆ ಬಾಣಸಿಗರನ್ನು ಕರೆದು ಕೊಂಡು ಹೋಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *