ಚುನಾವಣಾ ಪ್ರಣಾಳಿಕೆಯಲ್ಲಿರುವ ಸಾಲಮನ್ನಾ ಭರವಸೆಯನ್ನು ಮೊದಲು ಕಿತ್ತುಹಾಕಬೇಕು: ರಘುರಾಮ್ ರಾಜನ್

Public TV
1 Min Read

ನವದೆಹಲಿ: ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿರುವ ಸಾಲಮನ್ನಾ ಆಶ್ವಾಸನೆಯನ್ನು ಮೊದಲು ಕಿತ್ತುಹಾಕಬೇಕೆಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಾಲಮನ್ನಾ ಯೋಜನೆಯಿಂದ ನಿಜಕ್ಕೂ ರೈತರ ಬದುಕು ಹಸನಾಗಿದೆಯೇ ಎಂದು ವಿದ್ಯಾರ್ಥಿಯೊಬ್ಬರು ರಘುರಾಮ್ ರಾಜನ್ ಅವರನ್ನು ಪ್ರಶ್ನಿಸಿದ್ದರು.

ಈ ಪ್ರಶ್ನೆಗೆ, ರಾಜಕೀಯ ಪಕ್ಷಗಳು ಸಾಲಮನ್ನಾ ಮಾಡುತ್ತಿರುವುದರಿಂದ ರಾಷ್ಟ್ರದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಅಲ್ಲದೇ ಸಾಲಮನ್ನಾದಿಂದಾಗಿ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಚುನಾವಣಾ ಆಯೋಗ ಪ್ರಣಾಳಿಕೆಗಳ ಪಟ್ಟಿಯಲ್ಲಿ ಮೊದಲು ಸಾಲಮನ್ನಾ ಭರವಸೆಯನ್ನು ತೆಗೆದುಹಾಕಬೇಕು. ಅಲ್ಲದೇ ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಾನು ಪತ್ರ ಬರೆದಿದ್ದೇನೆಂದು ಉತ್ತರಿಸಿದರು.

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಸಾಲಮನ್ನಾ ಭರವಸೆ ಪ್ರಮುಖ ಕಾರಣವಾಗಿದೆ. ಅಲ್ಲದೇ ಛತ್ತೀಸಗಢದಲ್ಲಿ ಸಾಲಮನ್ನಾ ಭರವಸೆಯಿಂದಲೇ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿದೆ. ಈಗ ಪಂಚರಾಜ್ಯಗಳ ಸೋಲಿನ ನಂತರ ಪ್ರಧಾನಿ ಮೋದಿಯವರೂ ಸಹ ದೇಶದ ಎಲ್ಲಾ ರೈತರ ಸುಮಾರು 4 ಲಕ್ಷ ಕೋಟಿ ಸಾಲಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ ಎಂದು ಹೇಳಿದರು.

ಇದಲ್ಲದೇ ಆರ್ಥಿಕ ತಜ್ಞರುಗಳಾದ ಅಭಿಜಿತ್ ಬ್ಯಾನರ್ಜಿ, ಪ್ರಂಜುಲ್ ಭಂಡಾರಿ, ಸಜ್ಜಿದ್ ಚಿನಾಯ್, ಮೈತ್ರೀಶ್ ಘಟಕ್, ಗೀತಾ ಗೋಪಿನಾಥ್, ಅಮಥ್ರ್ಯ ಲಹಿರಿ, ನೀಲಕಾಂತ್ ಮಿಶ್ರಾ, ಪ್ರಾಚಿ ಮಿಶ್ರಾ, ಕಾರ್ತಿಕ್ ಮುರುಳೀಧರನ್, ರೋಹಿಣಿ ಪಾಂಡೆ, ಈಶ್ವರ್ ಪ್ರಸಾದ್ ಮತ್ತು ಸೋಮನಾಥನ್ ರವರೊಂದಿಗೆ ಜತೆಗೂಡಿ ಭಾರತದ ಆರ್ಥಿಕತೆಯ ಕಾರ್ಯತಂತ್ರ ಕುರಿತಂತೆ ವರದಿಯನ್ನು ಸಿದ್ಧಪಡಿಸಿದ್ದೇವೆ.

ಈ ವರದಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಮನದಲ್ಲಿಟ್ಟುಕೊಂಡು, ಮುಂದಿನ 5 ವರ್ಷಗಳಲ್ಲಿ ಯಾವ ಆರ್ಥಿಕ ನೀತಿಗೆ ಪ್ರಾಮುಖ್ಯತೆಯನ್ನು ನೀಡಬೇಕೆಂದು ಉಲ್ಲೇಖಿಸಿದ್ದೇವೆ. ಅಲ್ಲದೇ ಇದು ಭಾರತದ ಆರ್ಥಿಕ ಸ್ಥಿತಿ ಅಭಿವೃದ್ಧಿ ನಡೆಸಿರುವ ವಿಶ್ಲೇಷಣೆಯೂ ಆಗಿದೆ. ಈ ವರದಿಯ ಹಿಂದೆ ಯಾವುದೇ ಸರ್ಕಾರ ಅಥವಾ ಪಕ್ಷವನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಿಲ್ಲವೆಂದು ರಘುರಾಮ್ ಸ್ಪಷ್ಟಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

Share This Article
Leave a Comment

Leave a Reply

Your email address will not be published. Required fields are marked *