ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ಹರಕೆ ಈಡೇರಿಸಿದ ರಾಘವೇಂದ್ರ ರಾಜ್‍ಕುಮಾರ್

Public TV
2 Min Read

ಉಡುಪಿ: ಡಾ. ರಾಜ್‍ಕುಮಾರ್ ಅವರ ಎರಡನೇ ಪುತ್ರ ನಟ ರಾಘವೇಂದ್ರ ರಾಜ್‍ಕುಮಾರ್ ಅವರು ಕುಟುಂಬ ಸಮೇತರಾಗಿ ಕೊಲ್ಲೂರು ಕ್ಷೇತ್ರಕ್ಕೆ ಬಂದು ತಮ್ಮ ಹರಕೆಯನ್ನು ತೀರಿಸಿದ್ದಾರೆ.

ರಾಘವೇಂದ್ರ ರಾಜ್‍ಕುಮಾರ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಗ ಅವರ ಆರೋಗ್ಯದಲ್ಲಿ ಚೇತರಿಕೆಯಾದರೆ ಅಮ್ಮನ ಸೇವೆ ಮಾಡುತ್ತೇವೆ ಅಂತ ಹರಕೆ ಹೊತ್ತುಕೊಂಡಿದ್ದಾರಂತೆ. ಅದರಂತೆ ಈಗ ಅವರ ಆರೋಗ್ಯ ಸುಧಾರಣೆಯಾಗಿದ್ದು, ಎಷ್ಟರ ಮಟ್ಟಿಗೆ ರಾಘವೇಂದ್ರ ರಾಜ್‍ಕುಮಾರ್ ಚೇತರಿಸಿಕೊಂಡಿದ್ದಾರೆಂದರೆ, ಎರಡು ಚಿತ್ರಗಳನ್ನು ಕಂಪ್ಲೀಟ್ ಮಾಡಿದ್ದಾರೆ. ಅಲ್ಲದೆ ಮತ್ತೆರಡು ಚಿತ್ರಗಳ ಕಾಲ್ ಶೀಟ್‍ಗೆ ಸಹಿಯೂ ಮಾಡಿದ್ದಾರೆ.

ಈ ಹಿಂದೆ ಡಾ. ರಾಜ್ ಅವರನ್ನು ದಂತ ಚೋರ ವೀರಪ್ಪನ್ ತಮಿಳುನಾಡು ಕಾಡಲ್ಲಿ ಅಪಹರಿಸಿಟ್ಟಿದ್ದಾಗ ಅಣ್ಣಾವ್ರನ್ನು ಕಾಡಿನಿಂದ ಕರೆದುಕೊಂಡು ಬರಲು ರಾಜಕೀಯ ಹೈಡ್ರಾಮಗಳೇ ನಡೆದು ಹೋಗಿತ್ತು. ಡಾ. ರಾಜ್ ಕೊನೆಗೆ ಬಿಡುಗಡೆಯೂ ಆದರು. ಇದಕ್ಕೆ ಕಾರಣ ಕೊಲ್ಲೂರಮ್ಮನಿಗೆ ದೊಡ್ಮನೆ ಕುಟುಂಬ ಹೇಳಿದ್ದ ಒಂದು ಹರಕೆ ಎಂದು ಸ್ವತಃ ರಾಘವೇಂದ್ರ ರಾಜ್ ಕುಮಾರ್ ಅವರೆ ಸತ್ಯ ಬಿಚ್ಚಿಟ್ಟಿದ್ದಾರೆ. ಅಂದಿನಿಂದ ಪ್ರತಿ ವರ್ಷ ಡಾ. ರಾಜ್ ಅವರು ಕೊಲ್ಲೂರಿಗೆ ಬಂದು ಚಂಡಿಕಾಹೋಮ ನಡೆಸಿಕೊಡುತ್ತಿದ್ದರು. ಒಂದು ಬಾರಿ ಗಾನಗಂಧರ್ವ ಜೇಸುದಾಸ್ ಜೊತೆ ಡಾ. ರಾಜ್ ಕುಮಾರ್ ಕೊಲ್ಲೂರಿನಲ್ಲಿ ಸಂಗೀತ ಸೇವೆಯನ್ನೂ ಕೊಟ್ಟಿದ್ದರು.

ರಾಜ್‍ಕುಮಾರ್ ಕುಟುಂಬಸ್ಥರು ಕೊಲ್ಲೂರು ದೇವಿಯನ್ನು ಅಪಾರವಾಗಿ ನಂಬುತ್ತಾರೆ. ತಮ್ಮ ಸಮಸ್ಯೆಗಳಿಗೆ ತಾಯಿ ಪರಿಹಾರ ನೀಡುತ್ತಾಳೆ ಅಂತ ಕೊಲ್ಲೂರು ಮೂಕಾಂಬಿಕೆಯನ್ನು ಶ್ರದ್ಧೆಯಿಂದ ಪೂಜಿಸುತ್ತಾರೆ. ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಗುಣವಾಗಲಿ ಅಂತ ಕೊಲ್ಲೂರು ದೇವಿಗೆ ಹರಕೆ ಹೇಳಿಕೊಂಡಿದ್ದರು. ಆದರಿಂದ ರಾಘವೆಂದ್ರ ರಾಜ್‍ಕುಮಾರ್ ಹಾಗೂ ಅವರ ಕುಟುಂಬದವರು ಚಂಡಿಕಾ ಹೋಮದ ಆರಂಭದಿಂದ ಕೊನೆಯವರೆಗೂ ಯಜ್ಞಶಾಲೆಯಲ್ಲೇ ಇದ್ದು, ಪೂರ್ಣಾಹುತಿಯ ಸಂದರ್ಭದಲ್ಲೂ ತನ್ನ ಮತ್ತು ನಾಡಿನ ಎಲ್ಲರ ಆರೋಗ್ಯಕ್ಕಾಗಿ ದೇವರಲ್ಲಿ ಕೇಳಿಕೊಂಡಿದ್ದಾರೆ.

ಜೀವನದ ಕೊನೆಯವರೆಗೆ ಕೊಲ್ಲೂರು ಮೂಕಾಂಬಿಕೆಯ ಸೇವೆ ಮಾಡುವುದಾಗಿ ರಾಜ್ ಕುಮಾರ್ ಕುಟುಂಬ ತಿಳಿಸಿದೆ. ಕೊಲ್ಲೂರಿನಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಹೊರಟ ರಾಜ್ ಕುಟುಂಬ ಕರಾವಳಿಯ ಎಲ್ಲಾ ಪ್ರಮುಖ ದೇವಸ್ಥಾನಗಳಿಗೆ ಭೇಟಿಕೊಟ್ಟಿದೆ. ಹಾಗೆಯೇ ಕಾಪು ಮಾರಿಯಮ್ಮ ದೇವಸ್ಥಾನಕ್ಕೂ ಕೂಡ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಬಳಿಕ ಕ್ಷೇತ್ರದ ಇತಿಹಾಸವನ್ನು ಅರಿತುಕೊಂಡು ಬೆಂಗಳೂರಿಗೆ ಕಡೆ ಮುಖ ಮಾಡಿದ್ದಾರೆ.

ಸದ್ಯ ಉಡುಪಿಯಲ್ಲಿ ರಾಘವೇಂದ್ರ ರಾಜ್‍ಕುಮರ್ ಅಭಿನಯದ ತ್ರಯಂಬಕಂ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಚಿತ್ರೀಕರಣ ನಡೆದಿದ್ದು ರಾಕ್ ಸ್ಟಾರ್ ರೋಹಿತ್ ಮತ್ತು ಬಿಗ್ ಬಾಸ್ ಅನುಪಮ ಪ್ರಮುಖ ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *