ಪ್ರವಾಹ ಪೀಡಿತರಿಗೆ ಮರುಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದ ರಾಘಣ್ಣ

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ಅದೆಷ್ಟೋ ಜನರ ಬದುಕು ದುಸ್ಥಿತಿಗೆ ಬಂದಿದೆ. ಹೀಗಾಗಿ ನಾನು ಈ ವರ್ಷ ಆಗಸ್ಟ್ 15ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲ್ಲ ಎಂದು ನಟ ರಾಘವೇಂದ್ರ ರಾಜ್‍ಕುಮಾರ್ ಹೇಳಿದ್ದಾರೆ.

ನಟ ರಾಘವೇಂದ್ರ ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಭಾರೀ ಸಿದ್ಧತೆ ನಡೆಸಿದ್ದರು. ಈ ಬೆನ್ನಲ್ಲೇ ರಾಘಣ್ಣ ಅವರು ನೆರೆ ಸಂತ್ರಸ್ತರಿಗೆ ನೆರವು ನೀಡುವಂತೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

ಎಲ್ಲರಿಗೂ ನನ್ನ ನಮಸ್ಕಾರ. ನಾನು ನಿಮ್ಮ ರಾಘವೇಂದ್ರ ರಾಜ್‍ಕುಮಾರ್. ಆಗಸ್ಟ್ 15, ಗುರುವಾರ ಸ್ವಾತಂತ್ರ್ಯ ದಿನಾಚರಣೆ. ಅಂದು ನನ್ನ ಹುಟ್ಟುಹಬ್ಬ. ಆದರೆ ಕಾರಣಾಂತರಗಳಿಂದ ನಾನು ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ರಾಘಣ್ಣ ತಿಳಿಸಿದ್ದಾರೆ.

ಮಹಾ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಭಾರೀ ಹಾನಿಯಾಗಿದೆ. ಇಂತಹ ಸಮಯದಲ್ಲಿ ಕೇಕ್ ಕತ್ತರಿಸಿ, ಹೂವಿನ ಹಾರ ಹಾಕಿಕೊಂಡು, ಪಟಾಕಿ ಹೊಡೆದು ಸಂಭ್ರಮಿಸುವುದು ಸಂತ್ರಸ್ತರಿಗೆ ನೋವು ತರುತ್ತದೆ. ಅಷ್ಟೇ ಯಾಕೆ ನನಗೂ ಭಾರೀ ನೋವು ಉಂಟು ಮಾಡುತ್ತದೆ. ಇಂತಹ ಸಮಯದಲ್ಲಿ ನಾವು ಸಂತ್ರಸ್ತರ ಜೊತೆಗೆ ಇರಬೇಕಿದೆ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ನೀವು ಏನೇ ತಂದರೂ ಅದನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ. ನನ್ನ ತಂದೆ ಇದ್ದಿದ್ದರೆ ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಣೆ ಮಾಡುತ್ತಿರಲಿಲ್ಲ. ಸಂತ್ರಸ್ತರಲ್ಲಿ ನಮ್ಮ ಅಭಿಮಾನಿಗಳು ಕೂಡ ಇದ್ದಾರೆ. ಅವರೊಂದಿಗೆ ನಾವು ಇದ್ದೇವೆ ಎಂಬ ಪ್ರೀತಿಯನ್ನು ತೋರಿಸಬೇಕಿದೆ ಎಂದು ರಾಘಣ್ಣ ಮಾನವೀಯತೆ ಮೆರೆದಿದ್ದಾರೆ.

ಎಲ್ಲರೂ ಸೇರಿ ಉತ್ತರ ಕರ್ನಾಟಕದ ಜನರಿಗಾಗಿ ದೇವರಲ್ಲಿ ಪಾರ್ಥನೆ ಮಾಡಿಕೊಳ್ಳೋಣ. ಗುರುವಾರ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಬೇರೆ ಊರಿಗೆ ಹೋಗುತ್ತೇನೆ. ನೀವು ಬೇಜಾರು ಮಾಡಿಕೊಳ್ಳಬೇಡಿ. ನಿಮಗೆ ಹೇಳಿ ಹೋಗ ಬೇಕಾಗಿರುವುದು ನನ್ನ ಕರ್ತವ್ಯ. ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಋಣಿಯಾಗಿ ಇರುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

https://www.facebook.com/lightnshadowparamesh/videos/2350188035072772/

Share This Article
Leave a Comment

Leave a Reply

Your email address will not be published. Required fields are marked *