ರಾಹುಲ್‍ಗೆ ಎಚ್ಚರಿಕೆ ನೀಡಿ ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥಗೊಳಿಸಿದ ಸುಪ್ರೀಂ

Public TV
3 Min Read

ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ಯರ್ಥಗೊಳಿಸಿದೆ.

ರಫೇಲ್ ಡೀಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳ್ಳತನ ಎಸಗಿದ್ದಾರೆ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ ಎಂದು ರಾಹುಲ್ ಗಾಂಧಿ ಪ್ರಚಾರ ಭಾಷಣದಲ್ಲಿ ಹೇಳಿದ್ದರು. ಈ ಸಂಬಂಧ ರಾಹುಲ್ ಗಾಂಧಿ  ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸುವಾಗ ಬಹಳ ಜಾಗೃತೆ ವಹಿಸಬೇಕು. ರಾಜಕೀಯ ಲಾಭಕ್ಕಾಗಿ ಕೋರ್ಟ್ ಆದೇಶವನ್ನು ಎಳೆದು ತರಬಾರದು ಎಂದು ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಎಸ್‍ಕೆ ಕೌಲ್, ನ್ಯಾ. ಕೆ.ಎಂ ಜೋಸೆಫ್ ಅವರಿದ್ದ ಪೀಠ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದೆ.

ಏನಿದು ಪ್ರಕರಣ?
ರಫೇಲ್ ತೀರ್ಪಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಕೇಂದ್ರದ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಆದೇಶ ಬಂದ ನಂತರ ಚೌಕಿದಾರ್(ಪ್ರಧಾನಿ ಮೋದಿ) ಚೋರ್ ಹೈ ಎಂಬುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದ್ದರು. ಇದನ್ನೂ ಓದಿ: ಆಧಾರವಿಲ್ಲದೆ ಊಹಿಸಿದ ಮಾತ್ರಕ್ಕೆ ತನಿಖೆಗೆ ಆದೇಶಿಸಲ್ಲ – ಮೋದಿ ಸರ್ಕಾರಕ್ಕೆ ಬಿಗ್ ರಿಲೀಫ್

ರಾಹುಲ್ ಗಾಂಧಿ ಅವರು, ರಫೇಲ್ ಡೀಲ್ ಪ್ರಕರಣದ ಆದೇಶದಲ್ಲಿ ಇಲ್ಲದೆ ಇರುವ ಅಂಶಗಳನ್ನು ಉಲ್ಲೇಖಿಸಿ ಮೋದಿ ಅವರನ್ನು ಟೀಕೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸುಪ್ರೀಂ ಕೋರ್ಟಿನಲ್ಲಿ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ದೂರು ನೀಡಿದ್ದರು. ಮೀನಾಕ್ಷಿ ಲೇಖಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ನೀಡಬೇಕೆಂದು ಸೂಚಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯೂ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಕರಣ ರಾಜಕೀಯವಾಗಿ ತೀವ್ರತೆ ಪಡೆಯುತ್ತಿದ್ದಂತೆ ಅಫಿಡವಿಟ್ ಸಲ್ಲಿಸಿದ್ದ ರಾಹುಲ್ ಗಾಂಧಿ, ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂ ಹೇಳಿದೆ ಎನ್ನಲಾದ ಹೇಳಿಕೆ ಉದ್ದೇಶಪೂರ್ವಕವಲ್ಲದ ಅಜಾಗರೂಕತೆಯಿಂದ ಕೂಡಿದ ಹೇಳಿಕೆಯಾಗಿದೆ. ಈ ಹೇಳಿಕೆ ನೀಡಿದ್ದಕ್ಕೆ ನಾನು ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದರು.

ಕ್ಷಮೆ ಕೇಳುವುದಕ್ಕೆ ಮೊದಲು ನಡೆದ ವಿಚಾರಣೆ ವೇಳೆ ರಾಹುಲ್ ಪರ ಹಾಜರಿದ್ದ ವಕೀಲ ಅಭಿಷೇಕ್ ಸಿಂಘ್ವಿ, ಅಫಿಡವಿಟ್‍ಗಳಲ್ಲಿ `ಕ್ಷಮೆ’ (ಅಪಾಲಜಿ) ಎನ್ನುವ ಪದ ಇಲ್ಲದೇ ಇರುವುದು ದೋಷ. ಡಿಕ್ಷನರಿಯನ್ನು ಚೆಕ್ ಮಾಡಿದ್ದೇನೆ. ವಿಷಾದ (ರಿಗ್ರೆಟ್) ಅಂದರೆ ಕ್ಷಮಾಪಣೆ (ಸಿವಿಲ್ ಅಪಾಲಜಿ) ಎಂದೇ ಅರ್ಥ ಬರುತ್ತದೆ ಎಂದು ಸಮಜಾಯಿಷಿ ನೀಡಿದ್ದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ನಿಮ್ಮ ಕಕ್ಷಿದಾರರು ಏನು ಹೇಳಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಟ್ಟಿದ್ದೇವೆ ಎಂದಾಗ ರಾಜಕೀಯ ಸನ್ನಿವೇಶದಲ್ಲಿ ಚೌಕಿದಾರ್ ಚೋರ್ ಅನ್ನೋ ಪದ ಬಳಸಿದ್ದಾರೆ ಎಂದು ಉತ್ತರ ನೀಡಿದ್ದರು.

ಈ ಉತ್ತರಕ್ಕೆ ಗರಂ ಆಗಿದ್ದ ಸಿಜೆಐ, ನಿಮ್ಮ ರಾಜಕೀಯ ನಿಲುವುಗಳ ನಮಗೆ ಬೇಕಿಲ್ಲ. ನಿಮ್ಮ ರಾಜಕೀಯವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ಹೇಳಿ ಚಾಟಿ ಬೀಸಿದ್ದರು. ಈ ವೇಳೆ ಮುಕುಲ್ ರೊಹ್ಟಗಿ ಕೋರ್ಟ್ ಮೋದಿ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಹೇಳಿದ್ದಾರೆ. ಬ್ರಾಕೆಟ್‍ನಲ್ಲಿ ವಿಷಾದ ಅಂದ್ರೇನು ಅರ್ಥ? ಸುಪ್ರೀಂಕೋರ್ಟ್ ಪ್ರಧಾನಿಯನ್ನು ಕಳ್ಳ ಅಂತ ಹೇಳಿದೆ ಎಂದು ದೇಶದ ಹಾದಿ ತಪ್ಪಿಸೋ ಯತ್ನವಲ್ಲದೆ ಬೇರೇನೂ ಅಲ್ಲ ಎಂದು ಹೇಳಿ ಸಿಂಘ್ವಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಆಕ್ಷೇಪಕ್ಕೆ ಸಿಜೆಐ, ನಿಮ್ಮ ಕಕ್ಷಿದಾರ ಸ್ಪಷ್ಟವಾಗಿ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ನಿಂದನೆ ಎದುರಿಸಬೇಕಾಗುತ್ತದೆ ಎಂದಾಗ ಸಿಂಘ್ವಿ, ತಪ್ಪನ್ನು ತಿದ್ದಿಕೊಂಡು `ಕ್ಷಮೆ ಕೋರಿ’ ಹೊಸ ಅಫಿಡವಿಟ್ ಸಲ್ಲಿಸುತ್ತೇವೆ ಎಂದು ತಿಳಿಸಿದ್ದರು. ಅದರಂತೆ ರಾಹುಲ್ ಗಾಂಧಿ ಬೇಷರತ್ ಕ್ಷಮೆ ಕೇಳಿದ್ದು ಈಗ ಪ್ರಕರಣ ಇತ್ಯರ್ಥಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *