ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿತ್ಯ ರಾಮ್ ಅವರು ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಅವರ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ. ವಿವಾಹ ಮುಹೂರ್ತಕ್ಕಾಗಿ ವಧು ನಿತ್ಯಾ ರಾಮ್ ಗೋಲ್ಡನ್ ಬಣ್ಣದ ರೇಷ್ಮೆ ಸೀರೆ ಧರಿಸಿ ಮಿಂಚುತ್ತಿದ್ದರು. ವರ ಗೌತಮ್ ಬಿಳಿ ಬಣ್ಣದ ರೇಷ್ಮೆ ಪಂಚೆ-ಶಲ್ಯ ಧರಿಸಿದ್ದರು.
ಗೌತಮ್ ಹಾಗೂ ನಿತ್ಯಾ ಮದುವೆಗಾಗಿಯೇ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸ್ಪೆಷಲ್ ಸೆಟ್ ಹಾಕಲಾಗಿತ್ತು. ಇಲ್ಲಿ ಈ ಜೋಡಿ ಗುರು-ಹಿರಿಯರು ನಿಶ್ಚಯಿಸಿದ್ದ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆಗೆ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಇವರಿಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಿತ್ಯ ರಾಮ್ ಹಾಗೂ ಗೌತಮ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿದೆ. ನಿತ್ಯಾ ರಾಮ್ ತಾಯಿಯ ಸ್ನೇಹಿತರ ಮಗನೇ ಗೌತಮ್. ಹೀಗಾಗಿ ಕುಟುಂಬದವರ ಮೂಲಕ ಪರಿಚಯರಾದ ಗೌತಮ್ ಅವರನ್ನೇ ನಿತ್ಯಾ ವರಿಸಿದ್ದಾರೆ. ಗೌತಮ್ ಉದ್ಯಮಿಯಾಗಿದ್ದು, ಆಸ್ಟ್ರೇಲಿಯಾದಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ಮದುವೆ ನಂತರ ನಟಿ ನಿತ್ಯಾ ಕೂಡ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಲಿದ್ದಾರೆ.
ನಿತ್ಯಾ ರಾಮ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ನಂದಿನಿ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ಆದರೆ ಈಗ ಸೀರಿಯಲ್‍ನಿಂದ ನಿತ್ಯಾರಾಮ್ ಹೊರಬಂದಿದ್ದಾರೆ. ಪತಿಯ ಜೊತೆಗೆ ಸಮಯ ಕಳೆಯಲು ನಿರ್ಧರಿಸಿರುವ ನಿತ್ಯಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.