– ಅವಿರೋಧವಾಗಿ ಹಿಟ್ನಾಳ್ ಆಯ್ಕೆ
– ಧಮ್ಮು ತಾಕತ್ತು ಏನೆಂದು ತೋರಿಸಿದ್ದೇನೆ
– ಹಾಲು ಒಕ್ಕೂಟದ ಕಚೇರಿಗೆ ಬಾರದ ಭೀಮಾನಾಯ್ಕ್
ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ(ರಾಬಕೊವಿ) ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ನಿರೀಕ್ಷೆಯಂತೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ (Raghavendra Hitnal) ಪಾಲಾಗಿದೆ.
ಕಳೆದ ಎಂಟು ವರ್ಷಗಳಿಂದ ರಾಬಕೊವಿ ಹಾಗೂ ಐದು ವರ್ಷ ರಾಜ್ಯ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಮಾಜಿ ಶಾಸಕ ಭೀಮಾನಾಯ್ಕ್ (Bheema Naik) ಈ ಬಾರಿಯೂ ಅಧ್ಯಕ್ಷ ಸ್ಥಾನ ಅಲಂಕರಿಸುವ ವಿಶ್ವಾಸದಲ್ಲಿದ್ದರು. ಆದರೆ ಅಧ್ಯಕ್ಷರಾಗಲು ಬೇಕಿರುವ ನಿರ್ದೇಶಕರ ಸಂಖ್ಯಾಬಲ ಇಲ್ಲದ ಕಾರಣ ಕೆಎಂಫ್ ಮೇಲಿನ ಅವರ ಭೀಮಬಲವನ್ನು ಕುಸಿಯುವಂತೆ ಮಾಡಿತು.
ಕೊನೆಗಳಿಗೆವರೆಗೂ ಕೆಲವು ನಿರ್ದೇಶಕರು ಅವರ ಪರ ಬರಬಹುದು ಎನ್ನುವ ಕಾರಣಕ್ಕೆ ಬಳ್ಳಾರಿವರೆಗೂ ಬಂದಿದ್ದ ಭೀಮಾನಾಯ್ಕ್ ರಾಬಕೊವಿ ಹಾಲು ಒಕ್ಕೂಟದ ಕಚೇರಿವರೆಗೂ ಬರಲಿಲ್ಲ. ಅಲ್ಲದೇ ಬಳ್ಳಾರಿ ಸೇರಿ ಕೊಪ್ಪಳ, ರಾಯಚೂರು ಜಿಲ್ಲೆಯ ಕಾಂಗ್ರೆಸ್ (Congress0 ನಾಯಕರ ಒಳ ರಾಜಕಾರಣ ಭೀಮಾನಾಯ್ಕ್‌ಗೆ ಭಾರೀ ಮುಖಭಂಗವನ್ನುಂಟು ಮಾಡಿತು. ರಾಬಕೊವಿ ಅಧ್ಯಕ್ಷ ಸ್ಥಾನ ಅಲಂಕರಿಸಬೇಕು ಎನ್ನುವ ಲೆಕ್ಕಚಾರವನ್ನೇ ಬುಡಮೇಲು ಮಾಡಿತು. ಇದೇ ಕಾರಣಕ್ಕೆ ಒಕ್ಕೂಟದ ಕಚೇರಿಗೂ ಕಾಲಿಡದ ಭೀಮಾನಾಯ್ಕ್ ಖಾಸಗಿ ಹೋಟೆಲ್‌ನಲ್ಲಿ ಉಳಿದು ವಾಪಸ್ ಸ್ವಕ್ಷೇತ್ರಕ್ಕೆ ಮರಳಿದರು. ಇದನ್ನೂ ಓದಿ: ಒಡಿಶಾ | ಅರಣ್ಯ ಅಧಿಕಾರಿ ಮನೆ ಮೇಲೆ ವಿಜಿಲೆನ್ಸ್ ದಾಳಿ – ಸಂಪತ್ತಿನ ಖಜಾನೆ ಪತ್ತೆ!
8 ಜನರ ಬೆಂಬಲ:
ರಾಬಕೊವಿ ಹಾಲು ಒಕ್ಕೂಟಕ್ಕೆ ಒಟ್ಟು 12 ನಿರ್ದೇಶಕ ಸ್ಥಾನಗಳಿದ್ದು, 1 ಸರ್ಕಾರಿ ನಾಮ ನಿರ್ದೇಶನ, 5 ಸರ್ಕಾರಿ ಅಧಿಕಾರಿಗಳ ವೋಟ್‌ಗಳಿವೆ. ಆದರೆ ಚುನಾಯಿತ 12 ನಿರ್ದೇಶಕರ ಪೈಕಿ 7 ನಿರ್ದೇಶಕರು, ರಾಘವೇಂದ್ರ ಹಿಟ್ನಾಳ್ ಪರ ಮತ್ತು 5 ನಿರ್ದೇಶಕರು ಭೀಮಾನಾಯ್ಕ್ ಪರ ಇದ್ದರು. ರಾಘವೇಂದ್ರ ಹಿಟ್ನಾಳ್‌ರನ್ನು ನಾಮನಿರ್ದೇಶನ ಸದಸ್ಯರಾಗಿ ಸರ್ಕಾರ ನೇಮಕ ಮಾಡಿದ್ದರಿಂದ ಹಿಟ್ನಾಳ್ ಸದಸ್ಯ ಬಲ 8ಕ್ಕೆ ಏರಿಕೆಯಾಯಿತು. ಹೀಗಾಗಿ ಬಹುಮತ ಇಲ್ಲ ಎನ್ನುವ ಸುಳಿವು ಅರಿತು ಭೀಮಾನಾಯ್ಕ್ ನಾಮಪತ್ರ ಸಲ್ಲಿಸಲು ಆಗಮಿಸಲೇ ಇಲ್ಲ. ಇದೇ ಕಾರಣಕ್ಕೆ ರಾಬಕೊವಿಗೆ ರಾಘವೇಂದ್ರ ಹಿಟ್ನಾಳ್ ಅನಾಯಸವಾಗಿ, ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.
ಒಳ ರಾಜಕಾರಣದ ಪೆಟ್ಟು:
ರಾಘವೇಂದ್ರ ಹಿಟ್ನಾಳ್ ರಾಬಕೊವಿ ಅಧ್ಯಕ್ಷರಾಗಿ ಆಯ್ಕೆಯಾಗುವುದರ ಹಿಂದೆ ನಾಲ್ಕು ಜಿಲ್ಲೆಗಳ ಒಳ ರಾಜಕಾರಣ ಕೆಲಸ ಮಾಡಿದೆ. ವಿಶೇಷವಾಗಿ ಬಳ್ಳಾರಿ, ಕೊಪ್ಪಳದಲ್ಲಿನ ಕೆಲವು ಕಾಂಗ್ರೆಸ್ ಮುಖಂಡರು ಹಾಗೂ ಸ್ವತಃ ಕಾಂಗ್ರೆಸ್‌ನವರೇ ಗುನ್ನಾ ಇಟ್ಟಿದ್ದಾರೆ. ಇತ್ತೀಚೆಗೆ ಭೀಮಾನಾಯ್ಕ್ ಅಖಂಡ ಬಳ್ಳಾರಿ ಜಿಲ್ಲೆಯ ಯಾವ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲಿಲ್ಲ. ಮಂತ್ರಿಯಂತೆ ವರ್ತಿಸುವ ಸ್ವಭಾವ ಭೀಮಾನಾಯ್ಕ್‌ಗೆ ತಿರುಗುಬಾಣವಾಗಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ರಾಬಕೊವಿ ಅಧ್ಯಕ್ಷರಾಗಲು ಬಂದ ಕೊಪ್ಪಳ ಶಾಸಕ ಹಿಟ್ನಾಳ್ ಮತ್ತು ಅವರ ಬೆಂಬಲಿಗರಿಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರೇ ಅತಿಥ್ಯ ಕಲ್ಪಿಸಿದ್ದು ಕಂಡು ಬಂತು. ಇದನ್ನೂ ಓದಿ: 15 ವರ್ಷದಿಂದ ನಡೆಯುತ್ತಿದೆ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ- ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು
ಅವಿರೋಧ ಆಯ್ಕೆ:
ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ನಿಗದಿಯಂತೆ ಬೆಳಗ್ಗೆ 10 ಗಂಟೆಗೆ ಹಾಲು ಒಕ್ಕೂಟದ ಕಚೇರಿಯಲ್ಲಿ ಚುನಾವಣೆ ಅಧಿಕಾರಿ ಇರುವ ಕೊಠಡಿಗೆ ಆಗಮಿಸಿದ ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷ ಸ್ಥಾನಕ್ಕೆ, ಎನ್.ಸತ್ಯನಾರಾಯಣ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಎದುರಾಗಿ ಯಾವುದೇ ನಾಮಪತ್ರ ಸಲ್ಲಿಸದೇ ಇರುವುದರಿಂದ 1 ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಚುನಾವಣೆಗೆ ಬೇಕಿದ್ದ ಬಹುಮತ ಇರುವ ಕಾರಣಕ್ಕೆ ತಲೆಗಳ ಲೆಕ್ಕ ಹಾಕಿ ಎದುರಾಗಿ ಯಾರೂ ನಾಮ ಪತ್ರ ಸಲ್ಲಿಸದೇ ಇರದೇ ಇರುವ ಕಾರಣಕ್ಕೆ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ, ಎಸಿ ಪ್ರಮೋದ ಘೋಷಣೆ ಮಾಡಿದರು.
ವಿಜಯೋತ್ಸವ ಆಚರಣೆ:
ರಾಬಕೊವಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಪ್ರಕಟವಾಗುತ್ತಿದ್ದಂತೆಯೇ ಕಚೇರಿ ಮುಂದೆ ಜಮಾಯಿಸಿದ್ದ ನೂರಾರು ಕಾರ್ಯಕರ್ತರು, ಹಿಟ್ನಾಳ್ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಳ್ಳಾರಿ ನಗರ ಶಾಸಕ ಭರತರೆಡ್ಡಿ, ಕಂಪ್ಲಿ ಶಾಸಕ ಜೆಎನ್ ಗಣೇಶ ಸೇರಿ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರದ ಹಲವು ಕಾಂಗ್ರೆಸ್ ಮುಖಂಡರು ಆಗಮಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಸವಾಲು ಗೆದ್ದಿದ್ದೇನೆ:
ತಾಕತ್ತು, ಧಮ್ಮು ತೋರಿಸಲು ಅಧ್ಯಕ್ಷನಾದೆ ಎಂದ ಹಿಟ್ನಾಳ್- ಈ ಹಿಂದಿನ ಅಧ್ಯಕ್ಷರು ರಾಬಕೊವಿ ಹಾಲು ಒಕ್ಕೂಟಕ್ಕೆ ನಾಮಪತ್ರ ಸಲ್ಲಿಸಲು, ಅಧ್ಯಕ್ಷರಾಗಲು ದಮ್ಮು, ತಾಕತ್ತು ಬೇಕು ಎಂದು ಸವಾಲು ಹಾಕಿದ್ದರು. ಇದೇ ಕಾರಣಕ್ಕೆ ಅನಿರೀಕ್ಷಿತವಾಗಿ ನಾನು ಸಹಕಾರ ಕ್ಷೇತ್ರಕ್ಕೆ ಬಂದು ನನ್ನ ದಮ್ಮು, ತಾಕತ್ತು ಪ್ರದರ್ಶನ ಮಾಡಿದ್ದೇನೆ ಎಂದು ಭೀಮಾನಾಯ್ಕ್ ವಿರುದ್ದ ಕೊಪ್ಪಳ ಶಾಸಕ, ರಾಬಕೊವಿ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಆಕ್ರೋಶ ಹೊರ ಹಾಕಿದರು.
ರಾಬಕೊವಿ ಕಚೇರಿಯಲ್ಲಿ ನಡೆದ ಚುನಾವಣೆಯ ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಘವೇಂದ್ರ ಹಿಟ್ನಾಳ್, ಎಲ್ಲರೂ ಕಾಂಗ್ರೆಸ್ ಪಕ್ಷದವರೇ ಇರುವುದು ನಿಜ. ಆದರೆ ಇಲ್ಲಿನ ಒಕ್ಕೂಟಕ್ಕೆ ಬರಲು ದಮ್ಮು, ತಾಕತ್ತು ಇರಬೇಕು ಎಂದು ಸವಾಲು ಹಾಕಿದ್ದರು. ನಾನು ಈ ಸವಾಲು ಗೆದ್ದಿದ್ದೇನೆ ಮತ್ತು ಇದನ್ನು ಇಷ್ಟಕ್ಕೆ ಬಿಡುತ್ತೇನೆ ಎಂದರು.
ಇಲ್ಲಿ ಯಾರನ್ನೂ ತುಳಿಯುವ ಮಾತು ಬರುವುದಿಲ್ಲ. ಸಿಎಂ, ಡಿಸಿಎಂ ಹಾಗೂ ನಾಲ್ಕು ಜಿಲ್ಲೆಯ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿ ಕೆಲಸ ಮಾಡುತ್ತೇನೆ. ರಾಬಕೊವಿದಲ್ಲಿ ಹಲವು ಸಮಸ್ಯೆಗಳಿವೆ. ಇದು ಸಾಲದಲ್ಲಿದ್ದು ಇದೆಲ್ಲವನ್ನೂ ಸರಿಪಡಿಸುತ್ತೇನೆ. ಬಳ್ಳಾರಿಗೆ ಅನ್ಯಾಯವಾಗಿರುವುದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ. ರಾಬಕೊವಿಗೆ ಮಂಜೂರಾದ ಮೆಗಾ ಡೈರಿ ಬಳ್ಳಾರಿಯಲ್ಲೇ ಮಾಡುತ್ತೇವೆ. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಬಳಿಕ ಎಲ್ಲಾ ತೀರ್ಮಾನ ಆಗಿದೆ ಎಂದು ಹೇಳಿದರು.