ಕಾಂಗ್ರೆಸ್ ಪಕ್ಷದ ‘ಮತಗಳ್ಳತನ’ ಬಯಲು ಮಾಡಿದ ಸಿದ್ದರಾಮಯ್ಯ; ರಾಜಣ್ಣನಂತೆ ವಜಾ ಮಾಡ್ತೀರಾ – ರಾಗಾಗೆ ಅಶೋಕ್ ಸವಾಲ್

Public TV
2 Min Read

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮತಗಳ್ಳತನವನ್ನು ಸಿಎಂ ಸಿದ್ದರಾಮಯ್ಯ (Siddaramaiah) ಬಯಲು ಮಾಡಿದ್ದಾರೆ. ಈಗ ರಾಜಣ್ಣ ಅವರ ಹಾಗೆ ಸಿದ್ದರಾಮಯ್ಯರನ್ನೂ ವಜಾ ಮಾಡ್ತೀರಾ ಎಂದು ರಾಹುಲ್ ಗಾಂಧಿಗೆ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸವಾಲು ಹಾಕಿದ್ದಾರೆ.

ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅಶೋಕ್, 1991ರಲ್ಲಿ ಮಾನ್ಯ ಸಿದ್ದರಾಮಯ್ಯನವರು ಲೋಕಸಭೆಗೆ ಸ್ಪರ್ಧಿಸಿದ್ದರು. ಎಲ್ಲಿಂದ? – ಕೊಪ್ಪಳ ಲೋಕಸಭಾ ಕ್ಷೇತ್ರದಿಂದ, ಯಾವ ಪಕ್ಷದಿಂದ? – ಜನತಾದಳ ಪಕ್ಷದಿಂದ. ಸಿದ್ದರಾಮಯ್ಯನವರನ್ನ ಮೋಸದಿಂದ ಸೋಲಿಸಿದ್ದು ಯಾರು? – ಕಾಂಗ್ರೆಸ್ ಪಕ್ಷ ಎಂದು ಅಶೋಕ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಮತಗಳ್ಳತನ ವಿರುದ್ಧ ಬಿಹಾರದಿಂದಲೇ ನೇರ ಹೋರಾಟ: ರಾಹುಲ್ ಗಾಂಧಿ ಘೋಷಣೆ

‘ಮತಗಳ್ಳತನ’ದ ಎಂಬ ಕಪೋಲಕಲ್ಪಿತ ನಾಟಕದ ಬಗ್ಗೆ ಸತ್ಯ ನುಡಿದಿದ್ದ ಮಾಜಿ ಸಚಿವ ರಾಜಣ್ಣ ಅವರನ್ನು ಅತ್ಯಂತ ಅಗೌರವವಾಗಿ ಸಂಪುಟದಿಂದ ವಜಾ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ, ಈಗ ಕಾಂಗ್ರೆಸ್ ಪಕ್ಷದ ಮೋಸವನ್ನು ಬಯಲು ಮಾಡಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ, ಕಾಂಗ್ರೆಸ್ ಪಕ್ಷದಿಂದ ವಜಾ ಮಾಡುವ ಧೈರ್ಯ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಅಥವಾ ಕಾಂಗ್ರೆಸ್ ಪಕ್ಷದ ಪ್ರತಾಪ, ಶಿಸ್ತು ಕ್ರಮ ಏನಿದ್ದರೂ ದಲಿತ ನಾಯಕರ ಮೇಲೆ ಪ್ರಯೋಗ ಮಾಡಲು ಮಾತ್ರ ಸೀಮಿತನಾ? 2018 ರಲ್ಲಿ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಹೇಗೆ ಮತ ಖರೀದಿ ಮೂಲಕ ಗೆದ್ದರು ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು ಈಗಾಗಲೇ ಬಯಲು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತಗಳ್ಳತನ ಆರೋಪ: ದಾಖಲೆ ಕೊಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಕಾಂಗ್ರೆಸ್ ಪಕ್ಷದ ಏಕಚಕ್ರಾಧಿಪತ್ಯ ಇದ್ದ ಕಾಲದಲ್ಲಿ, ‘ಆಗೆಲ್ಲಾ ಇವಿಎಂ ಇರಲಿಲ್ಲ, ಒಬ್ರೋ ಇಬ್ರೋ ಕೂತ್ಕೊಂಡು ಒತ್ತು ಬುಡ್ರೋ ಅನ್ನೋರು’ ಎಂದು ಕಾಂಗ್ರೆಸ್ ಪಕ್ಷ 60 ವರ್ಷ ಹೇಗೆ ಚುನಾವಣೆ ಗೆಲ್ಲುತ್ತಿತ್ತು ಎನ್ನುವುದನ್ನ ಗೃಹ ಸಚಿವ ಪರಮೇಶ್ವರ್ ಅವರು ಲೀಲಾಜಾಲವಾಗಿ ವಿವರಿಸಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ನಮ್ಮ ದೇಶದಲ್ಲಿ ಮತಗಳ್ಳತನ, ಚುನಾವಣಾ ಅಕ್ರಮದ ಪಿತಾಮಹ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮತ್ತು ನೆಹರೂ-ಗಾಂಧಿ ಕುಟುಂಬ. ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡಿದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಎಂದು ಟಾಂಗ್ ಕೊಟ್ಟಿದ್ದಾರೆ.

Share This Article