ಪ್ರಿಯಾಂಕ್ ಖರ್ಗೆ ಕಲಬುರಗಿಯ ನಿಜಾಮ ಅಲ್ಲ, ಅನುಯಾಯಿಗಳು ರಜಾಕರಲ್ಲ, ರಾಜೀನಾಮೆ ಕೊಡಲಿ: ಅಶೋಕ್‌

Public TV
2 Min Read

– ಖರ್ಗೆ ಕುಟುಂಬಕ್ಕೆ ಅಂಬೇಡ್ಕರ್ ಸಂವಿಧಾನ ಅನ್ವಯ ಆಗುವುದಿಲ್ಲವೇ? ಎಂದು ಪ್ರಶ್ನೆ

ಬೆಂಗಳೂರು: ಖರ್ಗೆ ಕುಟುಂಬಕ್ಕೆ ಅಂಬೇಡ್ಕರ್ ಸಂವಿಧಾನ ಅನ್ವಯ ಆಗುವುದಿಲ್ಲವೇ? ಪ್ರಿಯಾಂಕ್ ಖರ್ಗೆ (Priyank Kharge) ಕಲಬುರಗಿಯ ನಿಜಾಮ ಅಲ್ಲ, ಅವರ ಅನುಯಾಯಿಗಳು ರಜಾಕರಲ್ಲ. ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶಿಸಲಿ ಎಂದು ವಿಪಕ್ಷ ನಾಯಕ ಆರ್.‌ ಅಶೋಕ್‌ (R Ashok) ಕಿಡಿ ಕಾರಿದ್ದಾರೆ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.‌ ಅಶೋಕ್‌ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಖರ್ಗೆ ಕುಟುಂಬಕ್ಕೆ ಅಂಬೇಡ್ಕರ್ ಸಂವಿಧಾನ ಅನ್ವಯ ಆಗುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ನಟ ದಿಲೀಪ್ ಶಂಕರ್

ಸಚಿವರ ಆಪ್ತ ರಾಜು ಕಪನೂರ್ ಒಬ್ಬ ಗೂಂಡಾ, ಅಕ್ರಮ ಪಿಸ್ತೂಲ್ ಹೊಂದಿದ್ದ. ಗುತ್ತಿಗೆದಾರ ಸಚಿನ್ ಪಾಚಾಳ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕಾರಣ. ಊರಿಗೆಲ್ಲಾ ಉಪದೇಶ ಮಾಡುವ ಪ್ರಿಯಾಂಕ್ ಖರ್ಗೆ ಮೊದಲು ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶನ ಮಾಡಲಿ. ಗುತ್ತಿಗೆದಾರ ಸಚಿನ್ ಸಾವಿನಲ್ಲಿ ಪ್ರಿಯಾಂಕ್ ಖರ್ಗೆ ಆಪ್ತರ ಪಾತ್ರವಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಲಿ, ಈ ಹಿಂದೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ, ಸಚಿವ ಈಶ್ವರಪ್ಪನವರ ರಾಜೀನಾಮೆ ಕೇಳಲಾಗಿತ್ತು. ಈಗ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮುಖಂಡನಿಂದ ಅನ್ನಸಂತರ್ಪಣೆ: ಭಾವೈಕ್ಯತೆ ಮೆರೆದ ಕರೀಂಸಾಬ್

ಸಚಿನ್ ಪಾಂಚಾಳ ಅವರು ಡೆತ್‌ನೋಟ್‌ನಲ್ಲಿ ರಾಜು ಕಪನೂರು ಹೆಸರು ಬರೆದಿಟ್ಟು, ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಂಚನೆ ಹಾಗೂ ಹಣಕ್ಕಾಗಿ ಕೊಲೆ ಬೆದರಿಕೆ ಆರೋಪ ಮಾಡಲಾಗಿದೆ. ಸಚಿನ್ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡು, ಕೂಡಲೇ ಹುಡುಕಿ ಕೊಡುವಂತೆ ಬೀದರ್‌ನ ಗಾಂಧಿಗಂಜ್ ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು. ಆದರೆ ದೂರು ದಾಖಲಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್ ನೀಡದೇ ವಂಚನೆ ಮಾಡಿದ್ದಾರೆ. ಮಾತ್ರವಲ್ಲದೇ 1 ಕೋಟಿ ಹಣ ನೀಡುವಂತೆ ಒತ್ತಡ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಸಚಿನ್‌ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಡೆತ್ ನೋಟ್‌ನಲ್ಲಿ ಕಲಬುರಗಿಯ ಮಾಜಿ ಕಾರ್ಪೊರೇಟರ್‌ ರವಿ ಕಪನೂರು, ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಲಾಗಿದೆ. ಇಂತಹ ಗೂಂಡಾಗಳನ್ನು ಆಪ್ತರಾಗಿ ಇಟ್ಟುಕೊಂಡ ಸಚಿವರು ಕೂಡ ಇಲ್ಲಿ ಹೊಣೆಗಾರರು. ಖರ್ಗೆ ಆಪ್ತ ವಲಯದಲ್ಲಿ ರಾಜು ಗುರುತಿಸಿಕೊಂಡಿದ್ದಾನೆ. ಕಲಬುರಗಿ ಮಹಾನಗರ ಪಾಲಿಕೆ ಸದಸ್ಯನೂ ಆಗಿದ್ದ ರಾಜು ಕಪನೂರ್, ಈ ಹಿಂದೆ ಅಕ್ರಮ ಪಿಸ್ತೂಲ್ ಹೊಂದಿರುವ ಆರೋಪದಲ್ಲಿ ಬಂಧಿತನಾಗಿದ್ದ. ಇವೆಲ್ಲ ಗೊತ್ತಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರಿಂದ ದೂರವಾಗಿಲ್ಲ. ಇಂತಹ ಗೂಂಡಾ, ಸಚಿವರ ಆಪ್ತ ಅಂದ್ರೆ ನಮ್ಮ ರಾಜ್ಯದಲ್ಲಿ ಗೂಂಡಾಗಳ, ರೌಡಿಗಳ ಸರ್ಕಾರ ನಡೆಯುತ್ತಿದೆ ಎಂದರ್ಥ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಹೋಟೆಲ್, ರೆಸಾರ್ಟ್‌ನವರು ನಿಯಮಗಳಿಗೆ ಅನುಸಾರ ಹೊಸ ವರ್ಷಾಚರಣೆ ಮಾಡಿ: ಡಿಕೆಶಿ‌ ವಾರ್ನಿಂಗ್‌

Share This Article