ಅರ್ಚಕರಿಗೆ ಹಾಗೂ ದೇವಾಲಯ ನೌಕರರಿಗೆ ಆರೋಗ್ಯ ವಿಮೆ ಜಾರಿಗೊಳಿಸಲು ಶೀಘ್ರ ಕ್ರಮ: ಜೊಲ್ಲೆ

Public TV
2 Min Read

ಬೆಂಗಳೂರು: ಮುಜರಾಯಿ ಇಲಾಖೆಯ ಆಡಳಿತ ಯಂತ್ರ ಚುರುಕುಗೊಳಿಸಲು ಅರ್ಚಕರಿಗೆ ಹಾಗೂ ದೇವಾಲಯ ನೌಕರರಿಗೆ ಆರೋಗ್ಯ ವಿಮೆ ಜಾರಿಗೊಳಿಸಲು ಶೀಘ್ರ ಕ್ರಮ ತೆಗೆದುಕೊಳ್ಳುವುದಾಗಿ ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ನಿರ್ಧರಿಸಿದ್ದಾರೆ.

ಶಶಿಕಲಾ ಜೊಲ್ಲೆ ಅವರು ಗುರುವಾರ ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಇಲಾಖೆಯ ಕಾರ್ಯ ಚಟುವಟಿಕೆಗಳಿಗೆ ವೇಗ ಹೆಚ್ಚಿಸಿ, ತ್ವರಿತಗತಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ:  ಯತ್ನಾಳ್, ಬೆಲ್ಲದ್‍ಗೆ ಅಭಿನಂದನೆ ಸಲ್ಲಿಸಿದ ಜಯಮೃತ್ಯುಂಜಯ ಸ್ವಾಮೀಜಿ


ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರು ಹಾಗೂ ದೇವಾಲಯ ನೌಕರರು ಆರೋಗ್ಯ ಸಮಸ್ಯೆಗೆ ಒಳಗಾದರೆ ಅವರಿಗೆ ರಕ್ಷಣೆ ಒದಗಿಸಲು ಆರೋಗ್ಯ ವಿಮೆ ಜಾರಿಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕುರಿತು ಶೀಘ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಮುಜರಾಯಿ ಇಲಾಖೆಯ ಸುಮಾರು 37,000 ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಸಂಸ್ಥೆಗಳಲ್ಲಿ ಈಗಾಗಲೇ 5ನೇ ಆಯೋಗ ವೇತನ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ಅರ್ಚಕರಿಗೆ 6ನೇ ವೇತನ ಆಯೋಗದ ವೇತನ ದೊರಕಿಸಿಕೊಡುವಂತೆ ಅನೇಕ ಶಾಸಕರಿಂದ ಹಲವಾರು ಬಾರಿ ಒತ್ತಡ ಬಂದಿದೆ. ಈ ಹಿನ್ನೆಲೆ ಕೆಲವು ಷರತ್ತುಗಳನ್ನು ವಿಧಿಸಿ, ದೇವಾಲಯದ ವಾರ್ಷಿಕ ಆದಾಯದಲ್ಲಿ ನೌಕರರ ವೇತನ 35% ರಷ್ಟು ಮೀರದಂತೆ ನೌಕರರನ್ನು 6ನೇ ವೇತನ ಆಯೋಗದ ವ್ಯಾಪ್ತಿಗೆ ಒಳಪಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಮೂಲಕ ಮುಜರಾಯಿ ಇಲಾಖೆಯ ಸುಮಾರು 1,034 ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಮೃತನ ಕುಟುಂಬಕ್ಕೆ ಬಹುಮಾನದ ಹಣ ನೀಡಿದ ಮೈಸೂರು ಪೊಲೀಸರು


ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲ ದೇವಸ್ಥಾನಗಳ ಆಸ್ತಿ, ಮಾರ್ಗ ನಕ್ಷೆ, ಅಲ್ಲಿನ ಸೇವೆಗಳ ಸಂಪೂರ್ಣ ಮಾಹಿತಿಯನ್ನು ಆನ್ ಲೈನ್ ಮೂಲಕ ತಿಳಿದುಕೊಳ್ಳುವಂತೆ ಐಟಿಎಂಎಸ್(ಇಂಟಿಗ್ರೆಟೆಡ್ ಟೆಂಪಲ್ ಮ್ಯಾನೇಜ್ ಮೆಂಟ್ ಸಿಸ್ಟಮ್) ಜಾರಿಗೆ ಕ್ರಮವಹಿಸುತ್ತೆ. ಇದರಿಂದ ರಾಜ್ಯದ ದೇವಾಲಯಗಳ ಮಾಹಿತಿ ಒಂದೆಡೆ ದೊರೆಯುವುದರಿಂದ ದೇಶ-ವಿದೇಶಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲಿದೆ. ದೇವಾಲಯಗಳ ಆದಾಯ ವೃದ್ಧಿಗೂ ಇದು ಪೂರಕವಾಗಲಿದೆ ಎಂದು ಹೇಳಿದರು.

2021-22ನೇ ಸಾಲಿನಲ್ಲಿ 134.62 ಕೋಟಿ ರೂ!

ಪ್ರತಿ ವರ್ಷವೂ ದೇವಸ್ಥಾನಗಳ ನಿರ್ವಹಣೆಗೆ ಬಿಡುಗಡೆ ಮಾಡುವ ತಸ್ತಿಕ್ ಅನುದಾನವು ತಾಂತ್ರಿಕ ಕಾರಣದಿಂದ ಸಮರ್ಪಕವಾಗಿ ಬಿಡುಗಡೆಯಾಗದೇ ವಿಳಂಬವಾಗಿದೆ. ಈ ಯೋಜನೆ ಅಡಿ 2021-22ನೇ ಸಾಲಿನಲ್ಲಿ 134.62 ಕೋಟಿ ರೂ. ಒದಗಿಸಲಾಗಿದ್ದು, ಮೊದಲ ಎರಡು ತ್ರೈಮಾಸಿಕದಲ್ಲಿ 67.31 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದ್ದು, ಆನ್ ಲೈನ್ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಕುರಿತು ಚರ್ಚಿಸಲಾಗಿದೆ. ಅಲ್ಲದೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿರುವುದನ್ನು ಗಮನಿಸಿದ ಸಚಿವರು ಈ ಬಗ್ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದರು. ಇದನ್ನೂ ಓದಿ:  ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಜನ ಅಸ್ವಸ್ಥ

ಮುಜರಾಯಿ ಇಲಾಖೆಯಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿರುವ ಸುಧಾರಣಾ ಕ್ರಮಗಳ ಬಗ್ಗೆ ಸಚಿವರು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದಾಗ ಮುಖ್ಯಮಂತ್ರಿಗಳು ಪೋತ್ಸಾಹ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಮುಜರಾಯಿ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಆಯುಕ್ತರಾದ ರೋಹಿಣಿ ಸಿಂಧೂರಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *