ಇಂದು ಪಂಜಾಬ್‌-ಮುಂಬೈ ನಡ್ವೆ ಕ್ವಾಲಿಫೈಯರ್‌-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!

Public TV
3 Min Read

ಅಹಮದಾಬಾದ್‌: ಪಂಜಾಬ್‌ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವೆ ಇಂದು ಕ್ವಾಲಿಫೈಯರ್‌-2 ಕದನ ನಡೆಯಲಿದೆ. ಗೆದ್ದ ತಂಡ ಜೂನ್‌ 3ರಂದು ಆರ್‌ಸಿಬಿ (RCB) ವಿರುದ್ಧ ಟ್ರೋಫಿಗಾಗಿ ಗುದ್ದಾಡಲಿದೆ.

ಇಂದು ಅಹಮದಾಬಾದ್‌ನಲ್ಲಿ 2ನೇ ಕ್ವಾಲಿಫೈಯರ್ (Qualifier 2 IPL) ಪಂದ್ಯ ನಡೆಯಲಿದ್ದು, ರಾತ್ರಿ 7:30ಕ್ಕೆ ಪಂದ್ಯ ಶುರುವಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಪ್ರಶಸ್ತಿ ಸುತ್ತಿನ ಕಾದಾಟ ನಡೆಸಲಿದೆ. ಈ ನಡುವೆ ಟ್ರೋಫಿ ಗೆಲ್ಲುವ ಲೆಕ್ಕಾಚಾರವೂ ಶುರುವಾಗಿದೆ. ಇದನ್ನೂ ಓದಿ: ರೋ’ಹಿಟ್‌’ ಆಟಕ್ಕೆ ಗಿಲ್‌ ಪಡೆ ಡಲ್‌; ಮುಂಬೈಗೆ 20 ರನ್‌ಗಳ ಜಯ – ಫೈನಲ್‌ ಸ್ಥಾನಕ್ಕೆ ಪಂಜಾಬ್‌ ವಿರುದ್ಧ ಫೈಟ್‌

ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಪಂದ್ಯದ ಚಿತ್ರಣವನ್ನೇ ಬುಡಮೇಲು ಮಾಡುವ ಸಾಮರ್ಥ್ಯ ಹೊಂದಿವೆ. ಪಂಜಾಬ್‌ ಹಾಗೂ ಮುಂಬೈ ಒಟ್ಟಾರೆ ಐಪಿಎಲ್‌ನಲ್ಲಿ 33 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಮುಂಬೈ 17 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್‌ 16 ಬಾರಿ ಗೆಲುವು ಸಾಧಿಸಿದೆ. ಆದ್ರೆ 11 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪ್ಲೇ ಆಫ್‌ ಪ್ರವೇಶಿಸಿರುವ ಪಂಜಾಬ್‌ ಕಿಂಗ್ಸ್‌ ಬಲಿಷ್ಠ ಪಡೆಯನ್ನ ಹೊಂದಿದ್ದು, ಪ್ರಶಸ್ತಿಗೆ ಮುತ್ತಿಡುವ ಕನಸು ಕಂಡಿದೆ.

ಇತ್ತ ಆರಂಭಿಕ 5 ಪಂದ್ಯಗಳಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್‌ ನಿರೀಕ್ಷೆಗೂ ಮೀರಿದ ಪ್ರದರ್ಶನದೊಂದಿಗೆ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. ಎಲಿಮಿನೇಟರ್‌-1ನಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನ ಹೊರದಬ್ಬಿ, ಕ್ವಾಲಿಫೈಯರ್‌-2ಗೆ ಲಗ್ಗೆಯಿಟ್ಟಿದೆ. ಇದನ್ನೂ ಓದಿ: ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ – ವೈರಲ್‌ ಆಯ್ತು ಅಭಿಮಾನಿಯ ಪೋಸ್ಟರ್‌

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈಗಾಗಲೇ 42 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಈ ವೇಳೆ ಮೊದಲು ಹಾಗೂ ಎರಡನೇ ಬಾರಿಗೆ ಬ್ಯಾಟ್ ಮಾಡಿದ ತಂಡಗಳು ತಲಾ 21 ಬಾರಿ ಗೆದ್ದಿವೆ. ಈ ಮೈದಾನದಲ್ಲಿ 243 ರನ್‌ ಗರಿಷ್ಠ ಸ್ಕೋರ್ ಆಗಿದೆ. ಇನ್ನು ಈ ಅಂಗಳದಲ್ಲಿ 204 ರನ್‌ವರೆಗೆ ಚೇಸಿಂಗ್‌ ಆಗಿದೆ. ಈ ಆವೃತ್ತಿಯಲ್ಲಿ ಈಗಾಗಲೇ ಈ ಮೈದಾನದಲ್ಲಿ 7 ಪಂದ್ಯಗಳು ನಡೆದಿದ್ದು, ಬ್ಯಾಟಿಂಗ್ ಮೊದಲ ಬಾರಿಗೆ ತಂಡ 6 ಪಂದ್ಯಗಳನ್ನು ಗೆದ್ದಿದೆ.

2023ರ ಆವೃತ್ತಿಯಲ್ಲಿ ಇದೇ ಪಿಚ್‌ನಲ್ಲಿ ಚೆನ್ನೈ 15 ಓವರ್‌ಗಳಲ್ಲಿ 170 ರನ್‌ ಚೇಸ್‌ ಮಾಡಿ 5ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದನ್ನೂ ಓದಿ: RCB ಟ್ರೋಫಿ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ ದಿನವನ್ನಾಗಿ ಘೋಷಿಸಿ – ಸಿಎಂಗೆ ವಿಶೇಷ ಪತ್ರ!

ಸ್ಟಾರ್‌ ಬ್ಯಾಟರ್‌ಗಳೇ ಬಲ:
ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ರೋಹಿತ್ ಶರ್ಮಾ, ಜಾನಿ ಬೇರ್‌ಸ್ಟೋ ಇನಿಂಗ್ಸ್ ಆರಂಭಿಸಲಿದ್ದು, ದೊಡ್ಡ ಮೊತ್ತಕ್ಕೆ ಈ ಜೋಡ ಭದ್ರ ಅಡಿಪಾಯ ಒಡ್ಡುವ ಸಾಧ್ಯತೆಗಳಿವೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಈ ಬಾರಿ ಫಾರ್ಮ್‌ ಸಾಬೀತು ಮಾಡಿದ್ದಾರೆ. ಮೊದಲು ಬ್ಯಾಟ್‌ ಮಾಡುವ ತಂಡ ದೊಡ್ಡ ಮೊತ್ತ ಕಲೆಹಾಕಿದ್ರೆ ಗೆಲುವು ಸಾಧ್ಯತೆಯಿದೆ. ಜಸ್ಪ್ರಿತ್ ಬುಮ್ರಾ, ಟ್ರೆಂಟ್‌ ಬೌಲ್ಟ್‌, ಅಶ್ವನಿ ಕುಮಾರ್‌ ವೇಗದ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಲಿದ್ದು, ಮಿಚೆಲ್‌ ಸ್ಯಾಂಟ್ನರ್ ಸ್ಪಿನ್ ಜಾದು ಸಹ ವರ್ಕೌಟ್‌ ಆಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಇನ್ನೂ ಪಂಜಾಬ್‌ನಲ್ಲೂ ಶ್ರೇಯಸ್‌ ಅಯ್ಯರ್‌, ಪ್ರಿಯಾಂಶ್‌ ಆರ್ಯ, ಸ್ಟೋಯಿನಿಸ್‌, ಶಶಾಂಕ್‌ ಸಿಂಗ್‌ ಅವರಂತಹ ಬ್ಯಾಟಿಂಗ್‌ ಪಡೆಯೇ ಇದೆ.

ಮುಂಬೈ ಸಂಭಾವ್ಯ ಪ್ಲೇಯಿಂಗ್‌-11
ರೋಹಿತ್ ಶರ್ಮಾ, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ರಾಜ್ ಬಾವಾ, ರಿಚರ್ಡ್ ಗ್ಲೀಸನ್/ರೀಸ್ ಟಾಪ್ಲೆ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್. ಇದನ್ನೂ ಓದಿ: IPL: ದೊಡ್ಡ ಅಂತರದ ಗೆಲುವು ಸಾಧಿಸಿ ಇತಿಹಾಸ ಬರೆದ ಆರ್‌ಸಿಬಿ – ಕೆಕೆಆರ್‌ ರೆಕಾರ್ಡ್‌ ಉಡೀಸ್‌

ಪಂಜಾವ್‌ ಸಂಭಾವ್ಯ ಪ್ಲೇಯಿಂಗ್‌-11
ಪ್ರಭ್‌ಸಿಮ್ರನ್‌ ಸಿಂಗ್, ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ಹರ್ಪ್ರೀತ್ ಬ್ರಾರ್, ಕೈಲ್ ಜೈಮಿಸನ್, ಯುಜುವೇಂದ್ರ ಚಾಹಲ್, ವಿಜಯಕುಮಾರ್ ವೈಶಾಖ್.

Share This Article