QPL ಸೀಸನ್ 2: ಶಿವಮೊಗ್ಗ ಕ್ವೀನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ

Public TV
3 Min Read

ತ್ಸಾಹ ಭರವಸೆಯ ಕ್ರೀಡಾ ಸಂಭ್ರಮಕ್ಕೆ ಸಾಕ್ಷಿಯಾದ KNS ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ಸೀಸನ್ 2 ಶನಿವಾರ ಮುಕ್ತಾಯಗೊಂಡಿತು. 12 ಕ್ರೀಡಾ ವಿಭಾಗಗಳಲ್ಲಿ 8 ಪಂದ್ಯಗಳನ್ನು ಗೆದ್ದು ಒಟ್ಟು ಅಂಕಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ ಶಿವಮೊಗ್ಗ ಕ್ವೀನ್ಸ್ ತಂಡ ಈ ಬಾರಿ ಚಾಂಪಿಯನ್ ಪಟ್ಟಕ್ಕೆ ಭಾಜನವಾಗಿ ಕಿರೀಟ ಧಾರಣೆ ಮಾಡಿತು.

ಕೊರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭಕ್ಕೆ ಸ್ಯಾಂಡಲ್ವುಡ್ ಕ್ವೀನ್ ನಟಿ ಮತ್ತು QPL ಸೀಸನ್ 2 (QPL season 2) ಬ್ರಾಂಡ್ ಅಂಬಾಸಿಡರ್ ರಮ್ಯಾ (Actress Ramya) ವಿಶೇಷ ಅತಿಥಿಯಾಗಿದ್ದರು. ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರೊಂದಿಗೆ ರಮ್ಯಾ ಟ್ರೋಫಿಯನ್ನು ವಿಜೇತರಿಗೆ ನೀಡಿ ತಂಡವನ್ನು ಅಭಿನಂದಿಸಿದರು. ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸಹ ಸಮಾರಂಭದಲ್ಲಿ ಹಾಜರಿದ್ದು ಲೀಗ್‌ಗೆ ಸರ್ಕಾರಿ ಮಟ್ಟದಲ್ಲಿ ಬೆಂಬಲ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ವಿರುದ್ಧ ದೂರು

ಟ್ರೋಫಿ ಪ್ರದಾನ ಸಂದರ್ಭದಲ್ಲಿ ಮಾತನಾಡಿದ ನಟಿ ರಮ್ಯಾ ʻಕ್ವೀನ್ಸ್ ಪ್ರೀಮಿಯರ್ ಲೀಗ್ನ ಒಂದು ಭಾಗವಾಗಿರುವುದು ನನಗೆ ತುಂಬಾ ಸಂತೋಷ. ಇಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮಹಿಳಾ ಕ್ರೀಡಾಪಟುವಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಆತ್ಮವಿಶ್ವಾಸ, ಶಿಸ್ತು ಮತ್ತು ಕ್ರೀಡೆ ಮೇಲಿನ ಪ್ರೀತಿ ಶ್ಲಾಘನೀಯ. ಈಗಲೇ ಸೀಸನ್–3 ಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದರು.

ಅದ್ಭುತ ಪ್ರದರ್ಶನದೊಂದಿಗೆ ಕಿರೀಟ ಗೆದ್ದ ಶಿವಮೊಗ್ಗ ಕ್ವೀನ್ಸ್ ನಾಯಕಿ ಭವನಾ ರಾವ್ ಅವರ ನೇತೃತ್ವದಲ್ಲಿ ಆಡಿದ ತಂಡವು ಟಗ್ ಆಫ್ ವಾರ್, ಬ್ಯಾಡ್ಮಿಂಟನ್, ಪಿಕಲ್ ಬಾಲ್ ಮತ್ತು ಲಾಗೋರಿ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿತು. ಡಾ. ಅಕ್ಷತಾ ಕುಲಕರ್ಣಿ, ಪ್ರಿಯಾಂಕ ಕಾಮತ್, ಸ್ಪೂರ್ತಿ ಗೌಡ, ಶೃತಿ ವೆಂಕಟೇಶ್, ಗೀತಾ ಪಿ, ಸುರೇಖಾ ಕುಲಕರ್ಣಿ, ವಿಂಧ್ಯಾ ರಂಗಸ್ವಾಮಿ, ರಾನಿಯಾ ಶೃತಿ, ಮಾನ್ಯಾ ಗೌಡ, ಮನಸಾ ಗುರುಸ್ವಾಮಿ, ಗಮನಾ ಜಿ. ಗೌಡ, ರಾಗಶ್ರೀ ಬಿ.ಜಿ., ಶೃತಿ ಸಿ., ವೈಶ್ಣವಿ ಬಿ., ರಕ್ಷಿಕಾ ಶೆಟ್ಟಿ ಸೇರಿದಂತೆ ಹಲವಾರು ಆಟಗಾರರಿಂದ ತಂಡಕ್ಕೆ ಅತ್ಯುತ್ತಮ ಕೊಡುಗೆ ಸಿಕ್ಕಿತು.

ಹರ್ಬ್ಸೈನ್ಸ್ ಸಂಸ್ಥೆಯ ನಿರ್ದೇಶಕಿ ರೂಪಾ ಡಿ.ಎನ್. ಅವರ ಮಾಲಕತ್ವದ ಮತ್ತು ನಟಿ ಶಾನ್ವಿ ಶ್ರೀನಿವಾಸ್ ನೇತೃತ್ವದ ಹಾಸನ ಕ್ವೀನ್ಸ್ ಕೇವಲ 3 ಅಂಕಗಳಿಂದ ಪ್ರಶಸ್ತಿಯನ್ನು ತಪ್ಪಿಸಿಕೊಂಡು ಎರಡನೇ ಸ್ಥಾನ ಗಳಿಸಿತು. ಈ ತಂಡವು ವಿಶೇಷವಾಗಿ ಚೆಸ್, ಗೋ–ಕಾರ್ಟಿಂಗ್ ಮತ್ತು ಬಾಸ್ಕೆಟ್‌ ಬಾಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು. ನಟಿ ಧನ್ಯ ರಾಮ್‌ಕುಮಾರ್ ನಾಯಕಿಯಾಗಿದ್ದ ಬಳ್ಳಾರಿ ಕ್ವೀನ್ಸ್ ತಂಡ ಬಹುತೇಕ ಎಲ್ಲ ಕ್ರೀಡಾ ವಿಭಾಗಗಳಲ್ಲಿ ಸಮತೋಲನ ಸಾಧನೆ ತೋರಿ ಮೂರನೇ ಸ್ಥಾನವನ್ನು ಪಡೆದಿತು.

ಕ್ರಿಕೆಟ್ ಫೈನಲ್ ಈ ಬಾರಿ ‘ವಿಶ್ವಕಪ್’ ಮಟ್ಟದ ರೋಮಾಂಚನ ನೀಡಿತು. ಅಂತಿಮ ಚೆಂಡಿಗೆ 4 ರನ್‌ಗಳು ಬೇಕಾಗಿದ್ದ ಬೆಳಗಾವಿ ಕ್ವೀನ್ಸ್ ಸೋಲು ಕಂಡು ಮಂಗಳೂರು ಕ್ವೀನ್ಸ್ ಅತ್ಯಂತ ರೋಚಕ ಅಂತಿಮ ಕ್ಷಣದಲ್ಲಿ ಜಯ ಸಾಧಿಸಿತು. ಟಗ್ ಆಫ್ ವಾರ್ ವಿಭಾಗದ ಫೈನಲ್‌ನಲ್ಲಿ ಶಿವಮೊಗ್ಗ ಕ್ವೀನ್ಸ್ ಮತ್ತೊಮ್ಮೆ ತಮ್ಮ ದೈಹಿಕ ಸಾಮರ್ಥ್ಯ ಮತ್ತು ತಂಡಸ್ಪೂರ್ತಿಯನ್ನು ಪ್ರದರ್ಶಿಸಿ ಪ್ರಶಸ್ತಿ ಗೆದ್ದಿತು.

ಲೀಗ್‌ನ್ನು ಯಶಸ್ವಿಯಾಗಿ ಸಂಘಟಿಸಿದ್ದ ತಂಡದ ಸಂಸ್ಥಾಪಕರಾದ ಮಹೇಶ್ ಕುಮಾರ್, ಪ್ರಮೊದ್ ಶೆಟ್ಟಿ, ಸಂತೋಷ್ ಬಿಲ್ಲವ, ಪ್ರೇಮ್ ಮಲ್ಲೂರು, ಚೇತನ್ ಪರಿಚ್ ಹಾಗೂ ಸದಸ್ಯರಾದ ಅಮೀತ್ ಜೋಶಿ, ಭರತ್ ಅಂಜನಪ್ಪ, ಯೋಗಿತಾ ಗೌಡ, ಅಖಿಲ್, ಅಮೃತಾ ಮೂರ್ತಿ, ಪಂಚಕ್ಷಾರಿ, ಅಶ್ವಿನ್ ಮುಂತಾದವರ ಶ್ರಮಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ಕ್ವೀನ್ಸ್ ಪ್ರೀಮಿಯರ್ ಲೀಗ್ ಮಹಿಳಾ ಕ್ರೀಡಾಪಟುಗಳ ಸಾಮರ್ಥ್ಯಕ್ಕೆ ವೇದಿಕೆ ಒದಗಿಸುತ್ತಾ, ಕರ್ನಾಟಕದಲ್ಲಿ ಮಹಿಳಾ ಕ್ರೀಡಾಕ್ಷೇತ್ರದ ವೃದ್ಧಿಗೆ ದಾರಿ ಮಾಡಿಕೊಡುತ್ತಿದೆ. ಇದನ್ನೂ ಓದಿ: ಸಂಕ್ರಾಂತಿಗೆ ಸುದೀಪ್ ಅಳಿಯ ಸಂಚಿತ್ ಸಿನಿಮಾ

Share This Article