ಇಸ್ರೇಲ್-ಹಮಾಸ್ ನಡ್ವೆ ಇಂದಿನಿಂದ ಕದನ ವಿರಾಮ – 13 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಸಿದ್ಧತೆ

Public TV
2 Min Read

ಟೆಲ್‌ ಅವೀವ್‌: ಅಕ್ಟೋಬರ್‌ 7 ರಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ನಡುವಿನ ಭೀಕರ ಯುದ್ಧದಲ್ಲಿ (Israel Hamas War) ಮಹತ್ವದ ಬೆಳವಣಿಗೆ ಕಂಡುಬಂದಿದೆ. ಒತ್ತೆಯಾಳುಗಳ (Hostages) ಬಿಡುಗಡೆಗಾಗಿ ಕದನ ವಿರಾಮ ನಿರ್ಧಾರಕ್ಕೆ ಒಪ್ಪಂದ ಏರ್ಪಟ್ಟಿದ್ದು, ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಘೋಷಣೆಯಾಗಲಿದೆ.

ಇಂದಿನಿಂದ ನಾಲ್ಕು ದಿನ ಕದನ ವಿರಾಮ ಘೋಷಣೆಯಾಗಲಿದ್ದು, ಒತ್ತೆಯಾಳುಗಳ ವಿನಿಮಯವೂ ನಡೆಯಲಿದೆ. ಒಟ್ಟು 4 ದಿನಗಳು ಕದನ ವಿರಾಮ ಇರಲಿದೆ. ಮೊದಲ ದಿನವೇ ಹಮಾಸ್‌ ಉಗ್ರರ ಗುಂಪು ಸೆರೆಹಿಡಿದಿದ್ದ 13 ಮಂದಿ ಇಸ್ರೇಲ್‌ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಮಧ್ಯವರ್ತಿ ಕತಾರ್‌ (Qatar) ಹೇಳಿದೆ.

ಕತಾರ್‌ ವಿದೇಶಾಂಗ ಸಚಿವಾಲಯದ ಪ್ರಕಾರ, ಭಾರತೀಯ ಕಾಲಮಾನ ಬೆಳಗ್ಗೆ 10:30ರಿಂದಲೇ ಕದನ ವಿರಾಮ ಪ್ರಾರಂಭವಾಗಲಿದೆ. ಆದ್ರೆ ಹಮಾಸ್‌ ಸಂಜೆ 7:30ರ ನಂತರ ಒತ್ತೆಯಾಳುಗಳ ಮೊದಲ ಬ್ಯಾಚ್‌ ಅನ್ನು ಬಿಡುಗಡೆ ಮಾಡಲಿದೆ. ಒಂದೇ ಕುಟುಂಬದ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡು 13 ಮಂದಿಯನ್ನು ಹಮಾಸ್‌ ಬಿಡುಗಡೆಗೊಳಿಸಲಿದೆ. ಒಪ್ಪಂದದ ಪ್ರಕಾರ 4 ದಿನಗಳಲ್ಲಿ ಒಟ್ಟು 50 ಮಂದಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ನೂಪುರ್ ಶರ್ಮಾ ಬೆಂಬಲಿಸಿದ್ದ ಗೀರ್ಟ್ ವೈಲ್ಡರ್ಸ್‌ಗೆ ಚುನಾವಣೆಯಲ್ಲಿ ಗೆಲುವು – ನೆದರ್ಲೆಂಡ್ಸ್ ಪ್ರಧಾನಿಯಾಗಲು ಸಜ್ಜು

ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿ ಸ್ವೀಕರಿಸಿದ್ದು, ಬಿಡುಗಡೆಗೊಳ್ಳಲಿರುವ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.

ಈ ನಡುವೆ ಇಸ್ರೇಲ್‌ ಜೈಲಿನಲ್ಲಿರುವ ಪ್ಯಾಲೆಸ್ತೀನ್ ಕೈದಿಗಳನ್ನೂ ಶುಕ್ರವಾರ ಬಿಡುಗಡೆಗೊಳಿಸುವುದಾಗಿ ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ಮಜೇದ್ ಅಲ್ ಅನ್ಸಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್‌ನಿಂದ ಇಳಿದು ಗುಂಡು ಹಾರಿಸಿ ಫಿಲ್ಮಿ ಸ್ಟೈಲ್‌ ಹೈಜಾಕ್‌ – ಭಾರತಕ್ಕೆ ಬರುತ್ತಿದ್ದ ಹಡಗು ಅಪಹರಣದ ವಿಡಿಯೋ ರಿಲೀಸ್‌

ಕತಾರ್‌ ಮತ್ತು ಯುಎಸ್‌ ಆಯೋಜಿಸಿದ ಒಪ್ಪಂದ ಕೊನೆಗೂ ಫಲ ಕೊಟ್ಟಿದ್ದು, 50 ಒತ್ತೆಯಾಳುಗಳ ಬಿಡುಗಡೆ ಸಂಬಂಧ ಇಸ್ರೇಲ್-ಹಮಾಸ್ ನಡುವೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದಕ್ಕೆ ಇಸ್ರೇಲ್ ಸಂಪುಟವೂ ಒಪ್ಪಿಗೆ ಸೂಚಿಸಿತ್ತು. ಈ ಒಪ್ಪಂದದ ಭಾಗವಾಗಿ ಇಸ್ರೇಲ್ 4 ದಿನ ಪ್ಯಾಲೆಸ್ತೀನ್‌ ಮೇಲೆ ಯಾವುದೇ ರೀತಿಯ ದಾಳಿ ಮಾಡುವುದಿಲ್ಲ. ಈ ಸಂದರ್ಭದಲ್ಲಿ 240 ಒತ್ತೆಯಾಳುಗಳ ಪೈಕಿ ಮಕ್ಕಳು, ಮಹಿಳೆಯರು ಸೇರಿ ಕನಿಷ್ಠ 50 ಮಂದಿಯನ್ನು ಹಮಾಸ್ ಬಿಡುಗಡೆ ಮಾಡಬೇಕಾಗುತ್ತದೆ. ಇಸ್ರೇಲ್ ಕೂಡ ತಮ್ಮ ಜೈಲುಗಳಲ್ಲಿರೋ ಪ್ಯಾಲೆಸ್ತೀನ್‌ ಮಹಿಳೆಯರು, ಮಕ್ಕಳನ್ನು ಬಿಡುಗಡೆ ಮಾಡಲಿದೆ.

Share This Article