ಗಲ್ಲು ಶಿಕ್ಷೆ ರದ್ದು – ಕತಾರ್‌ ಜೈಲಿನಲ್ಲಿರುವ 8 ಭಾರತೀಯರಿಗೆ ಬಿಗ್‌ ರಿಲೀಫ್‌

Public TV
2 Min Read

– ಮೋದಿಯ ರಾಜತಾಂತ್ರಿಕ ವಿಜಯವೆಂದ ಬಿಜೆಪಿ

ದೋಹಾ: ಗೂಢಚರ್ಯೆ ಪ್ರಕರಣದಲ್ಲಿ ಮರಣದಂಡನೆಯ (Death Sentence) ಭೀತಿ ಎದುರಿಸುತ್ತಿದ್ದ ಭಾರತೀಯ ನೌಕಾಪಡೆಯ ಎಂಟು ಮಂದಿ ನಿವೃತ್ತ ಅಧಿಕಾರಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಎಂಟು ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ರದ್ದು ಮಾಡಿ ಕತಾರ್ ಕೋರ್ಟ್ (Qatar Court) ತೀರ್ಪು ನೀಡಿದೆ. ಈ ಮೂಲಕ ಕಾನೂನು ಸಮರದಲ್ಲಿ ಭಾರತ ಸರ್ಕಾರಕ್ಕೆ (Indian Government) ಮೊದಲ ಗೆಲುವು ಸಿಕ್ಕಿದೆ.

ಮರಣದಂಡನೆಯನ್ನು ಜೈಲು ಶಿಕ್ಷೆಯಾಗಿ ಮಾರ್ಪಾಡು ಮಾಡಿ ತೀರ್ಪು ನೀಡಿದೆ. ಆದರೆ ಎಷ್ಟು ವರ್ಷ ಶಿಕ್ಷೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ಬಗ್ಗೆ ಕತಾರ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವುದಾಗಿ ಭಾರತೀಯ ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ. ಈ ಪ್ರಕರಣದಲ್ಲಿ ಮುಂದಿನ ಹೆಜ್ಜೆ ಇಡುವ ಬಗ್ಗೆ ಕಾನೂನು ಪರಿಣಿತರನ್ನು ಸಂಪರ್ಕಿಸಿದೆ.

ಕತಾರ್‌ನಲ್ಲಿರುವ ಭಾರತದ ರಾಯಭಾರಿ ವಿಪುಲ್ ಮತ್ತು ಇತರ ಅಧಿಕಾರಿಗಳು ಬಂಧಿತ ವ್ಯಕ್ತಿಗಳ ಕುಟುಂಬ ಸದಸ್ಯರೊಂದಿಗೆ ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ತೀರ್ಪಿನ ಸಂಪೂರ್ಣ ವಿವರಕ್ಕೆ ನಾವು ಕಾಯುತ್ತಿದ್ದೇವೆ. ಈ ವಿಚಾರದಲ್ಲಿ ಆರಂಭದಿಂದಲೂ ಕುಟುಂಬದ ಬೆಂಬಲಕ್ಕೆ ನಿಂತಿದ್ದೇವೆ ಮತ್ತು ನಾವು ಎಲ್ಲಾ ಕಾನ್ಸುಲರ್ ಮತ್ತು ಕಾನೂನು ನೆರವು ನೀಡುವುದನ್ನು ಮುಂದುವರಿಸುತ್ತೇವೆ. ಈ ಪ್ರಕರಣದ ವಿಚಾರಣೆಯು ಗೌಪ್ಯ ಮತ್ತು ಸೂಕ್ಷ್ಮ ಸ್ವರೂಪವಾಗಿರುವ ಕಾರಣ, ಈ ಹಂತದಲ್ಲಿ ಯಾವುದೇ ಹೆಚ್ಚಿನ ಪ್ರತಿಕ್ರಿಯೆಯನ್ನು ನೀಡುವುದು ಸೂಕ್ತವಲ್ಲಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮಿತ್ರ ಮೋದಿಯವರನ್ನು ರಷ್ಯಾದಲ್ಲಿ ನೋಡಲು ಹರ್ಷಿಸುತ್ತೇವೆ: ಪುಟಿನ್ ಆಹ್ವಾನ

ಕತಾರ್ ಸೇನಾ ಪಡೆಗಳಿಗೆ ತರಬೇತಿ ನೀಡುವ ಓಮನ್ ಮೂಲದ ಸಂಸ್ಥೆಯಲ್ಲಿ ಭಾರತೀಯ ನೌಕಾಪಡೆಯ 8 ನಿವೃತ್ತ ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ಆದರೆ ಗೂಢಚರ್ಯೆ ಆರೋಪದ ಮೇರೆಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಇವರ ಬಂಧನವಾಗಿತ್ತು. ವಿಚಾರಣೆ ಬಳಿಕ ಈ ಅಕ್ಟೋಬರ್‌ನಲ್ಲಿ 8 ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು.

ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಯಿಂದ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ರಿಲೀಫ್‌ ಸಿಕ್ಕಿದೆ. ಇದು ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿದೇಶಾಂಗ ನೀತಿಯ ರಾಜತಾಂತ್ರಿಕ ಪ್ರಯತ್ನಕ್ಕೆ ಸಿಕ್ಕಿದ ವಿಜಯವಾಗಿದೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಹೇಳಿದ್ದಾರೆ.

 

Share This Article