ಜೆಸಿಬಿ ತಡೆದು ಹೆಬ್ಬಾವು ರಕ್ಷಿಸಿದ ಗುರುರಾಜ್ ಸನಿಲ್- ಸಾರ್ವಜನಿಕರಿಂದ ಮೆಚ್ಚುಗೆ

Public TV
2 Min Read

ಉಡುಪಿ: ಗಿಡಗಂಟಿಗಳಿದ್ದ ಜಮೀನನ್ನು ಸ್ವಚ್ಛತೆ ಮಾಡುವಂತಹ ಸಂದರ್ಭದಲ್ಲಿ ಹೆಬ್ಬಾವೊಂದನ್ನು ರಕ್ಷಿಸಲಾಗಿದೆ. ಉಡುಪಿ ಜಿಲ್ಲೆಯ ಪೆರ್ಡೂರು ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪೆರ್ಡೂರು ಸ್ಥಳೀಯರೊಬ್ಬರು ಮನೆ ನಿರ್ಮಾಣಕ್ಕಾಗಿ ಜಮೀನನ್ನು ಸಮತಟ್ಟು ಮಾಡುತ್ತಿದ್ದರು. ಜಮೀನಿನಲ್ಲಿ ಹುತ್ತವೊಂದು ಇರುವುದನ್ನು ಮಾಲೀಕರು ನೋಡಿದ್ದಾರೆ. ಅದರೊಳಗೆ ಹಾವು ಇರಬಹುದು ಎಂದು ಸಂಶಯಪಟ್ಟಿದ್ದಾರೆ. ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಜಮೀನಿನ ಮಾಲೀಕರು ತಕ್ಷಣ ಫೋನ್ ಕರೆ ಮಾಡಿದ್ದಾರೆ. ಗುರುರಾಜ್ ಸ್ಥಳಕ್ಕಾಗಮಿಸಿ ಹುತ್ತವನ್ನು ಪರಿಶೀಲನೆ ಮಾಡಿದ್ದಾರೆ.

ಹುತ್ತದ ಒಳಗೆ ಹೆಬ್ಬಾವು ಇರುವುದು ಗುರುರಾಜ್ ಅವರ ಗಮನಕ್ಕೆ ಬಂದಿದೆ. ಜೆಸಿಬಿ ಕಾರ್ಯಾಚರಣೆಯನ್ನು ನಿಲ್ಲಿಸಿದ ಗುರುರಾಜ್ ತನ್ನ ಸಲಕರಣೆಯ ಮೂಲಕ ಹುತ್ತವನ್ನು ಅಗೆದಿದ್ದಾರೆ. ಹುತ್ತದ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಹೊಂದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಗುರುರಾಜ್ ಅವರು ಹೆಬ್ಬಾವನ್ನು ಹುತ್ತದಿಂದ ಹೊರಕ್ಕೆ ತೆಗೆದಿದ್ದಾರೆ. ಹುತ್ತದೊಳಗೆ ಬೇರೆ ಹಾವುಗಳು ಇದೆಯಾ ಎಂದು ಪರಿಶೀಲನೆ ಮಾಡಿದ ನಂತರ ಜೆಸಿಬಿ ಕಾರ್ಯಾಚರಣೆ ಮುಂದುವರಿದಿದೆ.

ಮಾರ್ಚ್ ತಿಂಗಳ ಆಸುಪಾಸಿನಲ್ಲಿ ಹೆಬ್ಬಾವುಗಳು ತನ್ನ ಪೊರೆಯನ್ನು ಕಳಚುತ್ತದೆ. ಈ ಪೊರೆ ಕಳಚುವ ಪ್ರಕ್ರಿಯೆ ಮಾಡಲು ಹಾವುಗಳು ಹುತ್ತವನ್ನು, ಜನವಸತಿ ಇಲ್ಲದ ಪ್ರದೇಶಗಳನ್ನು ಹುಡುಕುತ್ತಿರುತ್ತದೆ. ಮಳೆ ಕ್ಷಣೆ ಮಾಡಿದ ಹೆಬ್ಬಾವನ್ನು ಅದೇ ಪರಿಸರದಲ್ಲಿ ಸುರಕ್ಷಿತವಾಗಿ ಬಿಟ್ಟು ಕಳುಹಿಸಲಾಗಿದೆ. ಜಮೀನನ್ನು ಸಮತಟ್ಟು ಮಾಡುವಾಗ ಕಟ್ಟಡಗಳನ್ನು ನಿರ್ಮಿಸುವಾಗ ಪೂಜೆಗಳನ್ನು ನೆರವೇರಿಸುವ ಬದಲು ಹುತ್ತದ ಒಳಗೆ ಹಾವುಗಳಿದ್ದರೆ ಅದನ್ನು ರಕ್ಷಿಸಬೇಕು ಎಂದು ಗುರುರಾಜ್ ಸಾರ್ವಜನಿಕರಿಗೆ ಸಲಹೆ ಕೊಟ್ಟಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಗುರುರಾಜ್, ಹುತ್ತದಲ್ಲಿ ಹಾವುಗಳ ಸಂಚಾರವಿದ್ದ ಕುರುಹುಗಳು ದೊರೆಯಿತು. ಹಾಗಾಗಿ ಬಹಳ ಜಾಗ್ರತೆಯಿಂದ ಹುತ್ತ ತೆರವುಗೊಳಿಸಿದೆ. ಅರ್ಧ ಬಗೆಯುವಷ್ಟರಲ್ಲಿ ದೊಡ್ಡ ಗಂಡು ಹೆಬ್ಬಾವೊಂದು ಹುತ್ತದ ಆಳದಲ್ಲಿ ಗೋಚರಿಸಿತು.

ತಿಂಗಳ ಹಿಂದೆ ಅದು ಸಂತಾನೋತ್ಪತ್ತಿ ಪ್ರಕ್ರಿಯೆ ಮುಗಿಸಿ, ತನ್ನ ದೇಹದ ಹಳೆಯ ಪೊರೆಯನ್ನು ಕಳಚಿಕೊಳ್ಳಲು ಹುತ್ತದೊಳಗೆ ತಣ್ಣನೆ ಮಲಗಿತ್ತು. ಹೆಬ್ಬಾವಿಗೆ ಪೊರೆ ಕಳಚಲು ಸುಮಾರು 8-10 ದಿನಗಳು ಬೇಕಾಗುತ್ತವೆ. ಅಂಥ ಸಂದರ್ಭದಲ್ಲಿ ಅದು ಹೊರಗಿನ ಆಗುಹೋಗುಗಳನ್ನು ಗ್ರಹಿಸುವ ಶಕ್ತಿಯನ್ನು ಬಹುತೇಕ ಕಳೆದುಕೊಳ್ಳುತ್ತದೆ. ಅಷ್ಟು ದಿನಗಳ ಕಾಲ ತಣ್ಣನೆಯ ಪರಿಸರದಲ್ಲಿ ನಿಸ್ತೇಜವಾಗಿ ಮಲಗಿಬಿಡುತ್ತದೆ. ಹಾಗೆ ಮಲಗಿದ್ದ ಹೆಬ್ಬಾವಿದು. ನಮ್ಮ ಸಮಯಪ್ರಜ್ಞೆಯಿಂದ ಒಂದು ಅಮಾಯಕ ಜೀವಿ ಬದುಕಿ ಉಳಿಯಿತು ಎಂಬೂದು ಸಮಾಧಾನದ ಸಂಗತಿ ಎಂದು ಗುರುರಾಜ್ ವಿವರಿಸಿದ್ದಾರೆ.

ಹುತ್ತವನ್ನು ಬಗೆದಾದ ಮೇಲೆ ಹಾವನ್ನು ಅದರ ಪಾಡಿಗೆ ಹೋಗಲು ಬಿಟ್ಟೆವು. ಡಿಸೆಂಬರಿನಿಂದ ನಾಡಿದ್ದು ಜೂನ್ ಅಂತ್ಯದವರೆಗೆ ಬಹುತೇಕ ಎಲ್ಲಾ ಜಾತಿ, ಪ್ರಭೇದದ ಹಾವುಗಳ ವಂಶೋತ್ಪತ್ತಿ ಕಾಲ. ಮಾರ್ಚ್ ಅಂತ್ಯದಿಂದ ಜೂನ್ ಅಂತ್ಯದವರೆಗೆ ಹಾವುಗಳ ಮೊಟ್ಟೆಗಳೊಡೆದು ಮರಿಗಳು ಜನಿಸುವ ಸಮಯ. ನಾಗರಹಾವಿನಿಂದ ಹಿಡಿದು ಅನೇಕ ಪ್ರಭೇದದ ಹಾವುಗಳು ತಂಪಾದ ಹುತ್ತಗಳೊಳಗೂ ಅವುಗಳ ಆಸುಪಾಸಿನ ಹಸಿರು ಪರಿಸರದೊಳಗೂ ಮೊಟ್ಟೆಗಳನ್ನಿಟ್ಟು ಸುಮಾರು ಎರಡು ತಿಂಗಳುಗಳ ಕಾಲ ತಮ್ಮ ಕರುಳ ಕುಡಿಗಳನ್ನು ಕಾಪಾಡುತ್ತ ಅದೇ ಪ್ರದೇಶದೊಳಗೆ ಸುತ್ತಾಡುತ್ತಿರಬಹುದು. ಇನ್ನೊಂದಷ್ಟು ಕಾಲ ಹುತ್ತ ಮತ್ತು ಹಸಿರು ಪ್ರದೇಶಗಳನ್ನು ತೆರವು ಅಥವಾ ಸಮತಟ್ಟುಗೊಳಿಸುವುದು ಅಷ್ಟು ಸಮಂಜಸವಲ್ಲವೆಂದು ಗುರುರಾಜ್ ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *